ಶ್ರೀಲಂಕಾ: ನೂತನ ಪ್ರಧಾನಿಯಾಗಿ ಮಹಿಂದ ಪ್ರಮಾಣವಚನ

Update: 2019-11-21 15:57 GMT

Photo: Reuters 

ಕೊಲಂಬೊ, ನ. 21: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಗುರುವಾರ ದ್ವೀಪ ರಾಷ್ಟ್ರದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಹಾಲಿ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ರಾಜೀನಾಮೆ ಸಲ್ಲಿಸಿದರು.

ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸರ ಅಣ್ಣನಾಗಿರುವ ಮಹಿಂದ, 2020ರ ಆಗಸ್ಟ್‌ನಲ್ಲಿ ಸಂಸತ್‌ಗೆ ಚುನಾವಣೆ ನಡೆಯುವವರೆಗೆ ಉಸ್ತುವಾರಿ ಸಚಿವ ಸಂಪುಟದ ಪ್ರಧಾನಿಯಾಗಿ ಕಾರ್ಯನಿರ್ವಹಿಸುವರು.

74 ವರ್ಷದ ಮಹಿಂದ ರಾಜಪಕ್ಸ 2005ರಿಂದ 2015ರವರೆಗೆ ದೇಶದ ಅಧ್ಯಕ್ಷರಾಗಿದ್ದರು. ಅವರು 2018ರಲ್ಲಿ ಸ್ವಲ್ಪ ಅವಧಿಗೆ ಪ್ರಧಾನಿಯೂ ಆಗಿದ್ದರು.

ನವೆಂಬರ್ 16ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಧಾನಿ ರನಿಲ್ ವಿಕ್ರಮೆಸಿಂಘೆಯ ಪಕ್ಷ ಸೋಲನುಭವಿಸಿದ ಹಿನ್ನೆಲೆಯಲ್ಲಿ, ವಿಕ್ರಮೆಸಿಂಘೆ ಬುಧವಾರ ತನ್ನ ರಾಜೀನಾಮೆಯನ್ನು ಘೋಷಿಸಿದ್ದರು. ಚುನಾವಣೆಯಲ್ಲಿ ಗೊಟಬಯ ರಾಜಪಕ್ಸ ಉಪಪ್ರಧಾನಿ ಸಜಿತ್ ಪ್ರೇಮದಾಸರನ್ನು ಸೋಲಿಸಿದ್ದಾರೆ.

ಒಂದೂವರೆ ತಿಂಗಳ ಪ್ರಧಾನಿ!

2018 ಅಕ್ಟೋಬರ್ 26ರಂದು ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಿವಾದಾಸ್ಪದ ಕ್ರಮವೊಂದರಲ್ಲಿ ವಿಕ್ರಮೆಸಿಂೆಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ಮಹಿಂದ ರಾಜಪಕ್ಸರನ್ನು ಪ್ರಧಾನಿಯಾಗಿ ನೇಮಿಸಿದ್ದರು. ಅಧ್ಯಕ್ಷರ ಈ ಕ್ರಮವು ದ್ವೀಪರಾಷ್ಟ್ರವನ್ನು ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಮುಳುಗಿಸಿತು.

 ಆದರೆ, ಅಧಿಕಾರಕ್ಕೆ ಅಂಟಿಕೊಳ್ಳುವ ಮಹಿಂದ ರಾಜಪಕ್ಸರ ಪ್ರಯತ್ನಗಳು ಸುಪ್ರೀಂ ಕೋರ್ಟ್‌ನ ಎರಡು ಮಹತ್ವದ ತೀರ್ಪುಗಳ ಹಿನ್ನೆಲೆಯಲ್ಲಿ ವಿಫಲವಾದ ಬಳಿಕ ಡಿಸೆಂಬರ್ 15ರಂದು ರಾಜೀನಾಮೆ ನೀಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News