ಹಾಂಕಾಂಗ್ ಮಸೂದೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲೂ ಅಂಗೀಕಾರ

Update: 2019-11-21 16:03 GMT

ವಾಶಿಂಗ್ಟನ್, ನ. 21: ಹಾಂಕಾಂಗ್‌ನಲ್ಲಿ ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಹಾಗೂ ಆ ನಗರದ ಚೀನಾ ವಿರೋಧಿ ಪ್ರತಿಭಟನಕಾರರಿಗೆ ಬೆಂಬಲ ನೀಡುವ ಮಸೂದೆಗೆ ಅಮೆರಿಕದ ಸಂಸದರು ಬುಧವಾರ ಭರ್ಜರಿ ಅನುಮೋದನೆ ನೀಡಿದ್ದಾರೆ. ಈ ಮಸೂದೆಯು ಕಾನೂನಾಗಿ ಪರಿವರ್ತನೆಯಾಗಲು ಅಧ್ಯಕ್ಷರ ಅಂಕಿತಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಚೇರಿಗೆ ಹೋಗಿದೆ.

‘ಹಾಂಕಾಂಗ್ ಹ್ಯೂಮನ್ ರೈಟ್ಸ್ ಆ್ಯಂಡ್ ಡೆಮಾಕ್ರಸಿ ಆ್ಯಕ್ಟ್’ನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ 417-1 ಮತಗಳ ಬೃಹತ್ ಅಂತರದಿಂದ ಅಂಗೀಕರಿಸಿತು. ಈ ಮಸೂದೆಯನ್ನು ಮಂಗಳವಾರ ಅಮೆರಿಕ ಸೆನೆಟ್ ಅವಿರೋಧವಾಗಿ ಅಂಗೀಕರಿಸಿತ್ತು.

 ಈ ಮಸೂದೆಯ ಪ್ರಕಾರ, ಅಮೆರಿಕವು ಹಾಂಕಾಂಗ್‌ಗೆ ನೀಡಿರುವ ಅತ್ಯಾಪ್ತ ವ್ಯಾಪಾರ ಸ್ಥಾನಮಾನವನ್ನು ಅಮೆರಿಕ ಅಧ್ಯಕ್ಷರು ಪ್ರತಿ ವರ್ಷ ಮರುಪರಿಶೀಲನೆ ನಡೆಸಬೇಕಾಗುತ್ತದೆ ಹಾಗೂ ಹಾಂಕಾಂಗ್‌ನ ಸ್ವಾತಂತ್ರಕ್ಕೆ ಧಕ್ಕೆ ಬಂದರೆ ಈ ಸ್ಥಾನಮಾನವನ್ನು ಅಮೆರಿಕ ಹಿಂದಕ್ಕೆ ಪಡೆಯಬಹುದಾಗಿದೆ.

ಈಗ ಈ ಮಸೂದೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬಳಿಗೆ ಹೋಗುತ್ತದೆ. ತಾನು ಇದಕ್ಕೆ ಸಹಿ ಹಾಕುತ್ತೇನೆಯೇ ಇಲ್ಲವೇ ಎನ್ನುವುದನ್ನು ಅವರು ಖಚಿತವಾಗಿ ಏನೂ ಹೇಳಿಲ್ಲ. ಆದರೂ, ವೀಟೊ ಚಲಾಯಿಸಲು ಸಾಧ್ಯವಾಗದಷ್ಟು ಬಹುಮತದಿಂದ ಮಸೂದೆಯು ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ, ಅದಕ್ಕೆ ಸಹಿ ಹಾಕುವ ಅನಿವಾರ್ಯತೆಯನ್ನು ಟ್ರಂಪ್ ಎದುರಿಸುತ್ತಿದ್ದಾರೆ.

ಅಶ್ರುವಾಯು ಶೆಲ್, ರಬ್ಬರ್ ಗುಂಡು ಮಾರಾಟ ನಿಷೇಧಕ್ಕೂ ಅನುಮೋದನೆ

ಪ್ರಜಾಪ್ರಭುತ್ವಪರ ಪ್ರದರ್ಶನಕಾರರ ವಿರುದ್ಧ ಹಾಂಕಾಂಗ್ ಪೊಲೀಸರು ಬಳಸುತ್ತಿರುವ ಅಶ್ರುವಾಯು ಶೆಲ್‌ಗಳು, ರಬ್ಬರ್ ಗುಂಡುಗಳು ಮತ್ತು ಇತರ ಸಲಕರಣೆಗಳನ್ನು ಹಾಂಕಾಂಗ್‌ಗೆ ಮಾರಾಟ ಮಾಡುವುದನ್ನು ನಿಷೇಧಿಸುವ ಮಸೂದೆಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕಾರ ನೀಡಿದೆ. ಇದಕ್ಕೂ ಸೆನೆಟ್ ಒಂದು ದಿನದ ಮುಂಚೆಯೇ ಅನುಮೋದನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News