ಪರಿಸರಪರ ಹೋರಾಟಕ್ಕಾಗಿ ಗ್ರೆಟಾ ತನ್‌ಬರ್ಗ್‌ಗೆ ಮಕ್ಕಳ ಶಾಂತಿ ಪ್ರಶಸ್ತಿ

Update: 2019-11-21 16:10 GMT
ಫೋಟೊ: REUTERS

ದ ಹೇಗ್ (ನೆದರ್‌ಲ್ಯಾಂಡ್ಸ್), ನ. 21: ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಮಾಡಿರುವ ಕೆಲಸಕ್ಕಾಗಿ ಸ್ವೀಡನ್‌ನ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್‌ಗೆ ಬುಧವಾರ ಅಂತರ್‌ರಾಷ್ಟ್ರೀಯ ಮಕ್ಕಳ ಶಾಂತಿ ಬಹುಮಾನವನ್ನು ನೀಡಲಾಗಿದೆ.

ಗ್ರೆಟಾ ತನ್ನ ಪರಿಸರ ಹೋರಾಟದ ಮೂಲಕ ಜಗತ್ತಿನಾದ್ಯಂತದ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ಕ್ಯಾಮರೂನ್‌ನ ಶಾಂತಿ ಕಾರ್ಯಕರ್ತೆ 15 ವರ್ಷದ ಡಿವೀನಾ ಮಲೂಮ್‌ರಿಗೂ ಅಂತರ್‌ರಾಷ್ಟ್ರೀಯ ಮಕ್ಕಳ ಶಾಂತಿ ಬಹುಮಾನವನ್ನು ನೀಡಲಾಯಿತು. ನೆದರ್‌ಲ್ಯಾಂಡ್ಸ್‌ನ ‘ಕಿಡ್ಸ್‌ರೈಟ್’ ಸಂಸ್ಥೆಯು ಈ ಪ್ರಶಸ್ತಿಯನ್ನು 2005ರಿಂದ ಪ್ರತಿ ವರ್ಷ ನೀಡುತ್ತಾ ಬರುತ್ತಿದೆ.

ನೆದರ್‌ಲ್ಯಾಂಡ್ ರಾಜಧಾನಿ ದ ಹೇಗ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್‌ಬರ್ಗ್‌ಗೆ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಈಗ ಅವರು ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಅಂತರ್‌ರಾಷ್ಟ್ರೀಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ದೋಣಿ ಮೂಲಕ ಅಟ್ಲಾಂಟಿಕ್ ಸಾಗರವನ್ನು ದಾಟುತ್ತಿದ್ದಾರೆ.

ಆದರೂ, ಸಂದೇಶವೊಂದನ್ನು ಕಳುಹಿಸಿರುವ 16 ವರ್ಷದ ಪರಿಸರ ಹೋರಾಟಗಾರ್ತಿ, ಪ್ರಶಸ್ತಿಗಾಗಿ ಧನ್ಯವಾದ ಸಲ್ಲಿಸಿದ್ದಾರೆ ಹಾಗೂ ಪ್ರಶಸ್ತಿಯಿಂದ ತಾನು ಗೌರವಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News