ರಕ್ಷಣಾ ಸಮಿತಿಗೆ ಮಾಲೇಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ನಾಮಕರಣ ಬಗ್ಗೆ ವಿವಾದ

Update: 2019-11-21 16:29 GMT

ಹೊಸದಲ್ಲಿ, ನ.21: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣೆ ಕುರಿತು ಸಂಸದೀಯ ಸಮಾಲೋಚನಾ ಸಮಿತಿಗೆ ನಾಮಕರಣ ಮಾಡಿರುವುದು ವಿವಾದವನ್ನು ಸೃಷ್ಟಿಸಿದೆ. 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದು,ಅನಾರೋಗ್ಯದ ಕಾರಣದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಠಾಕೂರ್ ಅಕ್ರಮ ಚಟುವಟಿಕೆಗಳ ಕಾಯ್ದೆ,ಐಪಿಸಿ,ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗಳಡಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ.

‘ ಭಯೋತ್ಪಾದನೆ ಆರೋಪಿ ಮತ್ತು ಗೋಡ್ಸೆಯ ಅಂಧಾಭಿಮಾನಿಯಾಗಿರುವ ಠಾಕೂರನ್ನು ರಕ್ಷಣೆ ಕುರಿತು ಸಂಸದೀಯ ಸಮಾಲೋಚನಾ ಸಮಿತಿಯ ಸದಸ್ಯೆಯನ್ನಾಗಿ ನಾಮಕರಣಗೊಳಿಸಿರುವ ಬಿಜೆಪಿ ಸರಕಾರದ ಕ್ರಮವು ರಾಷ್ಟ್ರದ ರಕ್ಷಣಾ ಪಡೆಗಳಿಗೆ,ಗೌರವಾನ್ವಿತ ಸಂಸದರಿಗೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಮಾಡಿರುವ ಅವಮಾನವಾಗಿದೆ ’ಎಂದು ಕಾಂಗ್ರೆಸ್ ಗುರುವಾರ ಟ್ವೀಟಿಸಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪ್ರಣವ ಝಾ ಅವರು,ಠಾಕೂರ್ ನೇಮಕವು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು. ಠಾಕೂರ್ ನೇಮಕದ ಬಗ್ಗೆ ಮರುಚಿಂತನೆ ನಡೆಸುವಂತೆ ಬಿಜೆಪಿಯನ್ನು ಆಗ್ರಹಿಸಿದರು.

 ಸಮಾಲೋಚನಾ ಸಮಿತಿಯನ್ನು ಸಂಸದೀಯ ವ್ಯವಹಾರಗಳ ಸಚಿವಾಲಯವು ನಿರ್ಧರಿಸುತ್ತದೆಯೇ ಹೊರತು ಖುದ್ದು ಸಂಸತ್ ಅಲ್ಲ. ಸಮಿತಿಗೆ ಸಮಾಲೋಚನೆಯ ಅಧಿಕಾರ ಮಾತ್ರವಿದೆ ಮತ್ತು ಅದರ ಶಿಫಾರಸುಗಳು ಬಂಧನಕಾರಿಯಲ್ಲ.

ಅ.31ರ ಅಧಿಸೂಚನೆಯಂತೆ ಶ್ರೀನಗರದಲ್ಲಿ ಗೃಹಬಂಧನದಲ್ಲಿರುವ ನ್ಯಾಷನಲ್ ಕಾನ್‌ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರೂ ಸಮಿತಿಯ ಸದಸ್ಯರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News