ಈ 21 ವರ್ಷದ ಯುವಕ ದೇಶದ ಅತಿ ಕಿರಿಯ ನ್ಯಾಯಾಧೀಶ !

Update: 2019-11-21 17:35 GMT

 ಜೈಪುರ, ನ. 21: ಜೈಪುರದ 21 ವರ್ಷದ ಮಾಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನದ ನ್ಯಾಯಾಧೀಶರಾಗಿ ನೇಮಕರಾಗುವ ಮೂಲಕ ದೇಶದ ಅತಿ ಕಿರಿಯ ನ್ಯಾಯಾಧೀಶ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ನ್ಯಾಯಾಧೀಶರಾಗಲು ಪ್ರಾಮಾಣಿಕತೆ ಅತಿ ಮುಖ್ಯ ಮಾನದಂಡ ಎಂದು ಮಾಯಾಂಕ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ನ್ಯಾಯಾಧೀಶರಾಗಲು ಆಯ್ಕೆ ಪರೀಕ್ಷೆ ಉತ್ತಿರ್ಣರಾಗಲು ಯಾವ ರೀತಿ ಸಿದ್ಧತೆ ಮಾಡಿದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಯಾಂಕ್, ''ನಾನು ರಾಜಸ್ಥಾನದ ನ್ಯಾಯಾಂಗ ಸೇವೆ 2018ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿದಿನ 12ರಿಂದ 13 ಗಂಟೆಗಳ ಕಾಲ ಅಧ್ಯಯನ ನಡೆಸಿದೆ'' ಎಂದಿದ್ದಾರೆ.

ನಾನು ನಿಸ್ಸಂಶಯವಾಗಿ ಸಂತಸಗೊಂಡಿದ್ದೇನೆ. ನನ್ನ ಪ್ರಕಾರ ಉತ್ತಮ ನ್ಯಾಯಧೀಶ ಪ್ರಾಮಾಣಿಕರಾಗಿರಬೇಕು. ಹಣ ಬಲ ಹಾಗೂ ತೋಳ್ಬಲ ಸೇರಿದಂತೆ ಬಾಹ್ಯ ಪ್ರಭಾವಗಳಿಗೆ ಒಳಗಾಗಬಾರದು ಎಂದು ಮಾಯಾಂಕ್ ಹೇಳಿದ್ದಾರೆ.

  ಮಾನಸರೋವರದ ನಿವಾಸಿಯಾಗಿರುವ ಮಾಯಾಂಕ್ ರಾಜಸ್ಥಾನ್ ವಿಶ್ವವಿದ್ಯಾನಿಲಯದಿಂದ ಐದು ವರ್ಷಗಳ ಎಲ್‌ಎಲ್‌ಬಿ ಪದವಿಯನ್ನು ಈ ವರ್ಷ ಎಪ್ರಿಲ್‌ನಲ್ಲಿ ಪಡೆದಿದ್ದರು. ಆರ್‌ಜೆಎಸ್ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದರು.

ರಾಜಸ್ಥಾನ ಆರ್‌ಜೆಎಸ್ ಪರೀಕ್ಷೆಯ ಹಾಜರಾಗಲು ಕನಿಷ್ಠ ಪ್ರಾಯ 21ಕ್ಕೆ ಇಳಿಕೆ ಮಾಡಿದೆ. ಈ ಹಿಂದೆ ಈ ಪರೀಕ್ಷೆಗೆ ಹಾಜರಾಗಲು ಕನಿಷ್ಠ ಪ್ರಾಯ 23 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News