ಭಾರತ 2025ರ ವೇಳೆಗೆ 5 ಲಕ್ಷ ಕೋ.ಡಾಲರ್ ಆರ್ಥಿಕತೆಯಾಗುವುದು ಅಸಾಧ್ಯ: ಆರ್‌ಬಿಐ ಮಾಜಿ ಗವರ್ನರ್ ಸಿ.ರಂಗರಾಜನ್

Update: 2019-11-21 17:42 GMT

ಅಹ್ಮದಾಬಾದ್, ನ.21: ಭಾರತವು ಶ್ರೀಮಂತ ದೇಶವಾಗಲು ಸುಸ್ಥಿರ ಬೆಳವಣಿಗೆಯ ಇನ್ನೂ 22 ವರ್ಷಗಳು ಬೇಕು ಎಂದು ಗುರುವಾರ ಇಲ್ಲಿ ಹೇಳಿದ ಮಾಜಿ ಆರ್‌ಬಿಐ ಗವರ್ನರ್ ಸಿ.ರಂಗರಾಜನ್ ಅವರು,ಸದ್ಯದ ಬೆಳವಣಿಗೆ ದರದಲ್ಲಿ ಭಾರತವು 2015ರ ವೇಳೆಗೆ ಐದು ಲಕ್ಷ ಕೋಟಿ ಡಾ.ಆರ್ಥಿಕತೆಯಾಗುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಹ್ಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನಲ್ಲಿ ‘ಸದ್ಯದ ಆರ್ಥಿಕ ಸ್ಥಿತಿ ’ಕುರಿತು ಐಬಿಎಸ್-ಐಸಿಎಫ್‌ಎಐ ಏರ್ಪಡಿಸಿದ್ದ ಏಳನೇ ಯಶಸ್ವಿ ಸ್ಮಾರಕ ಉಪನ್ಯಾಸವನ್ನು ನೀಡಿದ ರಂಗರಾಜನ್, “ಜನರು ಐದು ಲಕ್ಷ ಕೋಟಿ ಡಾ.ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂದು ಭಾರತದ ಆರ್ಥಿಕತೆ ಸುಮಾರು 2.7 ಲ.ಕೋ.ಡಾ.ಗಳಾಗಿದ್ದು,ಇದನ್ನು ದುಪ್ಪಟ್ಟುಗೊಳಿಸುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. 2025ರ ವೇಳೆಗೆ ಈ ಗುರಿಯನ್ನು ಸಾಧಿಸಲು ವಾರ್ಷಿಕ ಶೇ.9ಕ್ಕೂ ಹೆಚ್ಚಿನ ಬೆಳವಣಿಗೆ ದರ ಅಗತ್ಯವಿದೆ ಮತ್ತು ಅಷ್ಟರೊಳಗೆ ಈ ಗುರಿಯನ್ನು ಸಾಧಿಸುವುದು ಆಗದ ಹೋಗದ ಮಾತು. ಈಗಾಗಲೇ ಎರಡು ವರ್ಷಗಳು ಕಳೆದುಹೋಗಿವೆ. ಈ ವರ್ಷ ಬೆಳವಣಿಗೆ ದರ ಶೇ.6ರಷ್ಟು ಮತ್ತು ಮುಂದಿನ ವರ್ಷ ಬಹುಶಃ ಸುಮಾರು ಶೇ.7ರಷ್ಟು ಆಗಬಹುದು,ಆ ಬಳಿಕ ಆರ್ಥಿಕತೆಯು ಚೇತರಿಸಿಕೊಳ್ಳಬಹುದು” ಎಂದರು.

“ಆಸಕ್ತಿಯ ವಿಷಯವೆಂದರೆ ಐದು ಲ.ಕೋ.ಡಾ.ಆರ್ಥಿಕತೆಯನ್ನು ಸಾಧಿಸಿದರೂ ಭಾರತದ ತಲಾದಾಯ ಈಗಿನ 1,800 ಡಾ.ಗಳಿಂದ 3,600 ಡಾ.ಗಳಿಗೆ ಹೆಚ್ಚಲಿದೆ. ಆಗಲೂ ಭಾರತವು ಕೆಳಮಧ್ಯಮ ಆದಾಯದ ರಾಷ್ಟ್ರವಾಗಿಯೇ ಉಳಿಯಲಿದೆ. ಮೇಲ್ಮಧ್ಯಮ ಆದಾಯದ ದೇಶವಾಗಲು ತಲಾದಾಯ 3,800 ಡಾ.ಗಳಷ್ಟಿರಬೇಕು ಮತ್ತು ಅದಕ್ಕೆ ಇನ್ನೂ ಕೆಲವು ವರ್ಷಗಳು ಬೇಕಾಗುತ್ತವೆ. ಶ್ರೀಮಂತ ದೇಶವಾಗಲು ಅದರ ವ್ಯಾಖ್ಯೆಯಂತೆ 12,000 ಡಾ.ತಲಾದಾಯ ಹೊಂದಿರಬೇಕು. ಭಾರತವು ಆ ಹಂತಕ್ಕೆ ತಲುಪಲು ವಾರ್ಷಿಕ ಶೇ.9 ಬೆಳವಣಿಗೆ ದರದೊಂದಿಗೆ 22 ವರ್ಷಗಳು ಬೇಕಾಗುತ್ತವೆ. ನಮ್ಮೆದುರಿನ ಕಾರ್ಯವು ಅತ್ಯಂತ ಸವಾಲಿನದ್ದಾಗಿದೆ. ನಾವು ಸಾಧ್ಯವಾದಷ್ಟು ಶೀಘ್ರ ಈಗಿನ ಆರ್ಥಿಕ ಮಂದಗತಿಯಿಂದ ಹೊರಬೇಕಿದೆ” ಎಂದರು.

ಆರ್ಥಿಕತೆಯನ್ನು ಉತ್ತೇಜಿಸುವ ಕ್ರಮಗಳಲ್ಲೊಂದಾಗಿ ಸರಕಾರವು ತನ್ನ ವೆಚ್ಚವನ್ನು ಹೆಚ್ಚಿಸಬಹುದು ಎಂದ ಅವರು,ಕೇಂದ್ರ ಮುಂಗಡಪತ್ರದಲ್ಲಿನ ಹಲವಾರು ಆದಾಯ ಮುನ್ನಂದಾಜುಗಳು ತಪ್ಪಾಗಬಹುದು,ಹೀಗಾಗಿ ಕಾರ್ಯಕ್ರಮಗಳ ಅನುಷ್ಠ್ಠಾನಕ್ಕೆ ಸರಕಾರಕ್ಕೆ ಅವಕಾಶ ಸೀಮಿತವಾಗಲಿದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಕ್ರಮಗಳು ಅಗತ್ಯವಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News