ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: 1106 ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ

Update: 2019-11-21 17:20 GMT

ಬಂಟ್ವಾಳ : 19.85 ಕಿ.ಮೀ.ಉದ್ದದ ಬಿ.ಸಿ.ರೋಡು-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾರ್ಯವು ಭರದಿಂದ ಸಾಗುತ್ತಿದ್ದು, ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಅಡ್ಡಿಯಾಗುತ್ತಿರುವ ಸಾವಿರಾರು ಮರಗಳ ತೆರವು ಕಾರ್ಯ ನಡೆಯುತ್ತಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಯಾಗಿರುವ 1106 ಮರಗಳನ್ನು ತೆರವು ಗೊಳಿಸುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ.

ಯಾವುದೇ ಹೆದ್ದಾರಿ/ರಸ್ತೆ ಅಭಿವೃದ್ಧಿಯ ವೇಳೆ ಮರಗಳನ್ನು ತೆರವುಗೊಳಿಸಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ರಸ್ತೆ ಕಾಮಗಾರಿ ನಿರ್ವಹಿಸುವ ಇಲಾಖೆಯು ಸರಕಾರಕ್ಕೆ ಮರ ತೆರವಿನ ಕುರಿತು ಮೊತ್ತ ಪಾವತಿಸಿದ ಬಳಿಕ ಅರಣ್ಯ ಇಲಾಖೆ ಅನುಮತಿ ನೀಡುತ್ತದೆ. ಮುಂದೆ ತೆರವಿನ ಕಾರ್ಯವನ್ನೂ ಕಾಮಗಾರಿ ನಿರ್ವಹಿಸುವ ಇಲಾಖೆಯೇ ಮಾಡಬೇಕಿದ್ದು, ಅದನ್ನು ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಹಾಲಿ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯಲ್ಲಿ ಬಂಟ್ವಾಳದ ಮಣಿಹಳ್ಳದಿಂದ ವಗ್ಗದವರೆಗೆ ಬೃಹತ್ ಗಾತ್ರದ ಸಾಕಷ್ಟು ಮರಗಳಿವೆ. 50ಕ್ಕಿಂತ ಹೆಚ್ಚಿನ ಮರಗಳನ್ನು ತೆರವುಗೊಳಿಸುವಾಗ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್ ಹಿಯರಿಂಗ್ ನಡೆಯಬೇಕಿದ್ದು, ಅದರಂತೆ ಬಂಟ್ವಾಳದಲ್ಲಿ ಹಿಯರಿಂಗ್ ನಡೆದ ಬಳಿಕ ಡಿಎಫ್‍ಓ ಅವರು ಮರಗಳ ತೆರವಿಗೆ ಅನುಮತಿ ನೀಡಿದ್ದರು.

1106 ಮರಗಳ ತೆರವಿಗೆ ಇಲಾಖೆ ಅನುಮತಿ

ಪ್ರಸ್ತುತ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಅಭಿವೃದ್ಧಿಗಾಗಿ ಪ್ರಾರಂಭದಲ್ಲಿ 1136 ಮರಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಪ್ರಸ್ತುತ ಸರಕಾರಿ ಹಾಗೂ ಹೆದ್ದಾರಿ ವ್ಯಾಪ್ತಿ(ಆರ್‍ಒಡಬ್ಯ್ಲು)ಗೆ ಬರುವ 1106 ಮರಗಳ ತೆರವಿಗೆ ಇಲಾಖೆ ಅನುಮತಿ ನೀಡಿದೆ. ಇದಕ್ಕಾಗಿ ಮರಗಳ ಮೌಲ್ಯ ಸೇರಿದಂತೆ ಇತರ ಎಲ್ಲಾ ಶುಲ್ಕಗಳು ಸೇರಿ ಒಟ್ಟು 1,25,88,840 ರೂ.ಗಳನ್ನು ಹೆದ್ದಾರಿ ಇಲಾಖೆಯು ಸರಕಾರಕ್ಕೆ ಪಾವತಿಸಿದೆ.

ನಿಯಮದ ಪ್ರಕಾರ ಒಂದು ಮರವನ್ನು ತೆರವುಗೊಳಿಸಿದರೆ 10 ಗಿಡಗಳನ್ನು ನೆಡಬೇಕಿದ್ದು, ಆದರೆ ಗಿಡಗಳನ್ನು ನೆಡುವ ಬದಲು ಅದನ್ನು ಹಣದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಒಂದು ಗಿಡವನ್ನು ನೆಡುವುದಕ್ಕೆ ತಲಾ 300 ರೂ.ಗಳ ಮೌಲ್ಯ ನಿಗದಿ ಪಡಿಸಲಾಗಿದ್ದು, ಅಂದರೆ 10 ಗಿಡಗಳ ನೆಡುವುದಕ್ಕೆ 3000 ರೂ.ಗಳ ಅಗತ್ಯವಿರುತ್ತದೆ. ಇಲ್ಲಿ 1106 ಮರಗಳನ್ನು ತೆರವುಗೊಳಿಸುವುದಾದರೆ 11,060 ಗಿಡಗಳನ್ನು ನೆಡುವುದಕ್ಕೆ 33,18,000 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಬಳಿಕ ನಿಯಮದಂತೆ ಕಿ.ಮೀ.ಗೆ ಒಟ್ಟು 3 ಲಕ್ಷ ರೂ.ಗಳನ್ನು ಪಾವತಿಸಬೇಕಿದ್ದು, ಅದರಂತೆ 52,80,000 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಹೀಗೆ ಒಟ್ಟು 85,98,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಮುಂದೆ ಮರಗಳ ಮೌಲ್ಯವನ್ನೂ ಕೂಡ ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ಹೆದ್ದಾರಿಯ 1106 ಮರಗಳ ಮೌಲ್ಯವನ್ನು 30,24,816 ರೂ.ಎಂದು ನಿಗದಿ ಪಡಿಸಲಾಗಿದೆ. ಇದಕ್ಕೆ ಅರಣ್ಯ ಅಭಿವೃದ್ಧಿ ಶುಲ್ಕವನ್ನು ಪಾವತಿಸಬೇಕಿದ್ದು, ಅದಕ್ಕಾಗಿ 3,62,978 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಜತೆಗೆ ಜಿಎಸ್‍ಟಿ 5,05,708 ರೂ. ಹಾಗೂ ಆದಾಯ ತೆರಿಗೆ 97,338 ರೂ.ಗಳನ್ನು ನಿಗದಿ ಪಡಿಸಲಾಗಿದ್ದು, ಹೀಗೆ ಎಲ್ಲಾ ಮೊತ್ತಗಳು ಸೇರಿ 1,25,88,840 ರೂ.ಗಳನ್ನು ಇಲಾಖೆ ಪಾವತಿಸಿದೆ. ಈ ಮೊತ್ತಗಳನ್ನು ಪಾವತಿಸಿದ ಬಳಿಕ ಮರಗಳನ್ನು ಕಡಿದು ಮಾರಾಟ ಮಾಡುವ ಜವಾಬ್ದಾರಿಯನ್ನು ರಾ.ಹೆ.ಇಲಾಖೆ ನಿರ್ವಹಿಸಬೇಕಿದ್ದು, ಸಾಗಾಟಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕುತ್ತಿರುವುದು ಸರಿಯಲ್ಲ. ಮಳೆ ಇಲ್ಲದೆ ವರ್ಷದ ಹಿಂದೆ ನೆಟ್ಟಿದ್ದ ಸಾವಿರಾರು ಸಸಿಗಳು ಒಣಗಿ ಹೋಗಿವೆ. ಸೂಕ್ತ ನಿರ್ವಹಣೆ ಇಲ್ಲದ ಕೆಲ ಸಸಿಗಳು ಜಾನುವಾರುಗಳ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕಾಮಗಾರಿ ಪೂರ್ಣ ಗೊಂಡ ಬಳಿಕವಾದರೂ ರಸ್ತೆ ಬದಿ ಮರಗಳನ್ನು ನೆಡುವ ಕೆಲಸ ಮಾಡಬೇಕು ಎನ್ನುವುದು ಪರಿಸರ ಪ್ರೇಮಿಯೊಬ್ಬರ ಒತ್ತಾಯ.

ಹೆದ್ದಾರಿಯ ಅಭಿವೃದ್ಧಿಗಾಗಿ 1106 ಮರಗಳ ತೆರವಿಗೆ ಡಿಎಫ್‍ಒ ಅವರು ಅನುಮತಿ ನೀಡಿದ್ದು, ನಿಯಮದ ಪ್ರಕಾರವೇ ಹೆದ್ದಾರಿ ಇಲಾಖೆ ಶುಲ್ಕ ಪಾವತಿಯ ಕಾರ್ಯ ಮಾಡಿದೆ. ಅನುಮತಿಗೆ ಮುಂಚೆ ಇಲಾಖೆಯು ಸಾರ್ವಜನಿಕ ಆಕ್ಷೇಪಣೆಗೂ ಅವಕಾಶ ನೀಡಿತ್ತು. ಮುಂದೆ ತೆರವುಗೊಂಡ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡಲಾಗುವುದು.

-ಬಿ.ಸುರೇಶ್
ವಲಯ ಅರಣ್ಯಾಧಿಕಾರಿ, ಬಂಟ್ವಾಳ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News