ನ. 24ರಂದು ಅಯೋಧ್ಯೆ ತೀರ್ಪಿನ ಪ್ರತಿ ರಾಮ್ ಲಲ್ಲಾಗೆ ಸಮರ್ಪಣೆ

Update: 2019-11-21 17:58 GMT

ಹೊಸದಿಲ್ಲಿ, ನ. 21: ರಾಮಜನ್ಮಭೂಮಿ-ಬಾಬರಿ ಮಸೀದಿ ಒಡೆತನ ವಿವಾದದ ಕುರಿತ ದೀರ್ಘ ಕಾಲದ ಕಾನೂನು ಹೋರಾಟದಲ್ಲಿ ರಾಮ್ ಲಲ್ಲಾ ವಿರಾಜ್‌ಮಾನ್‌ನನ್ನು ಪ್ರತಿನಿಧಿಸಿದ್ದ ವಕೀಲರು ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿಯನ್ನು ನವೆಂಬರ್ 24ರಂದು ರಾಮಜನ್ಮಭೂಮಿ ದೇವಾಲಯದಲ್ಲಿರುವ ರಾಮ ಲಲ್ಲಾನಿಗೆ ಸಲ್ಲಿಸಲಿದ್ದಾರೆ. ಈ ಸಂದರ್ಭ ವಕೀಲ ತಂಡದೊಂದಿಗೆ ವಿಶ್ವಹಿಂದೂ ಪರಿಷತ್‌ನ ಹಿರಿಯ ನಾಯಕರು ಜೊತೆಗಿರಲಿದ್ದಾರೆ.

ಕೇಶವ ಪರಾಶರಣ್ (93) ಸೇರಿದಂತೆ 24 ಹಿರಿಯ ವಕೀಲರ ತಂಡ ಮೊದಲು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ರಾಮಜನ್ಮ ಭೂಮಿಯಲ್ಲಿರುವ ತಾತ್ಕಾಲಿಕ ದೇವಾಲಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಲ್ಲಿಸಲಿದ್ದಾರೆ. ಅವರು ಹನುಮಾನ್ ಗರ್ಹಿ ದೇವಾಲಯಕ್ಕೆ ಕೂಡ ಭೇಟಿ ನೀಡಲಿದ್ದಾರೆ.

ಸನ್ಮಾನ ಕಾರ್ಯಕ್ರಮ ನವೆಂಬರ್ 23ರಂದು ಕರಸೇವಕ್‌ಪುರಂನಲ್ಲಿ ನಡೆಯಲಿದೆ ಎಂದು ಅಯೋಧ್ಯೆಯ ಜಿಲ್ಲಾ ದಂಡಾಧಿಕಾರಿ ಅನುಜ್ ಝಾ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಂಪತ್ ರಾಯ್ ಹಾಗೂ ದಿನೇಶ್ ಚಂದ್ರ ಸೇರಿದಂತೆ ವಿಶ್ವಹಿಂದೂ ಪರಿಷತ್‌ನ ಉನ್ನತ ನಾಯಕರು ಪಾಲ್ಗೊಳ್ಳಲಿದ್ದಾರೆ.

ವಕೀಲರ ತಂಡದ ಭೇಟಿಯ ವ್ಯವಸ್ಥೆಯ ಮೇಲ್ವಿಚಾರಣೆಗೆ ಮೂವರು ದಂಡಾಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News