ಮೇಧಾ ಪಾಟ್ಕರ್‌ಗೆ ಪಾಸ್‌ಪೋರ್ಟ್ ಸಿಗಬಹುದೇ ?

Update: 2019-11-21 18:01 GMT

 ಮುಂಬೈ, ನ. 21: ನರ್ಮದಾ ಬಚಾವೊ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕೇ ಎಂದು ನಿರ್ಧರಿಸುವ ಮೊದಲು ಅವರ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿವರವನ್ನು ಮುಂಬೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಲ್ಲಿ ಕೋರಿದೆ.

‘‘ನಿಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿವರವನ್ನು ಬಹಿರಂಗಪಡಿಸದೇ ಇರುವುದರಿಂದ ನಿಮ್ಮ ಪಾಸ್‌ಪೋರ್ಟ್ ಅನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ?’’ ಎಂದು ಪ್ರಶ್ನಿಸಿ ಮುಂಬೈಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಕ್ಟೋಬರ್ 18ರಂದು ನರ್ಮದಾ ಪಾಟ್ಕರ್ ಅವರಿಗೆ ನೋಟಿಸು ಜಾರಿ ಮಾಡಿತ್ತು.

   ಮಧ್ಯಪ್ರದೇಶದ ಜಿಲ್ಲೆಗಳಾದ ಬರ್ವಾನಿಯಲ್ಲಿ 3, ಅಲಿರಾಜ್‌ಪುರದಲ್ಲಿ 1 ಹಾಗೂ ಖಂಡ್ವಾದಲ್ಲಿ 5-ಹೀಗೆ ಮೇಧಾ ಪಾಟ್ಕರ್ ವಿರುದ್ಧದ 9 ಕ್ರಿಮಿನಲ್ ಪ್ರಕರಣಗಳ ತೀರ್ಪು ಬಾಕಿ ಇರುವುದಾಗಿ ಪಾಸ್‌ಪೋರ್ಟ್ ಕಚೇರಿ ತನ್ನ ನೋಟಿಸ್‌ನಲ್ಲಿ ಹೇಳಿತ್ತು. ಅಲ್ಲದೆ, 10 ದಿನಗಳ ಒಳಗೆ ವಿವರಣೆ ನೀಡುವಂತೆ ಆಗ್ರಹಿಸಿತ್ತು.

 ಇದರಲ್ಲಿ ಹೆಚ್ಚಿನ ಪ್ರಕರಣಗಳು ಗಲಭೆ ಹಾಗೂ ಸರಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದೆ. ಮೇಧಾ ಪಾಟ್ಕರ್ ಅವರಿಗೆ 2027 ಮಾರ್ಚ್ 29ರ ವರೆಗೆ ಮಾನ್ಯತೆ ಇರುವ ಪಾಸ್‌ಪೋರ್ಟ್ ಅನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ 2017 ಮಾರ್ಚ್‌ನಲ್ಲಿ ಮತ್ತೆ ನೀಡಿತ್ತು.

ಮೇಧಾ ಪಾಟ್ಕರ್ ಅವರು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳ ಮಾಹಿತಿ ಮರೆಮಾಚಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಸಂಜೀವ್ ಝಾ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮುಂಬೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಈ ನೋಟಿಸು ಜಾರಿ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಮೇಧಾ ಪಾಟ್ಕರ್, ‘‘ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ ತನ್ನ ವಿರುದ್ಧ ಯಾವುದೇ ಪ್ರಕರಣ ಬಾಕಿ ಇರಲಿಲ್ಲ ಎಂದು ನಾನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಪ್ರತಿಕ್ರಿಯೆ ಸಲ್ಲಿಸಿದ್ದೆ. ಪ್ರತಿಕ್ರಿಯೆ ಸಲ್ಲಿಸಿದ ಬಳಿಕವೂ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮತ್ತೊಂದು ನೋಟಿಸ್ ಕಳುಹಿಸಿತ್ತು. ಅದರಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ದಾಖಲೆಗಳ ಪುರಾವೆಗಳ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಕೆಲವು ಪ್ರಕರಣಗಳ ದಾಖಲೆಗಳು ನನ್ನಲ್ಲಿ ಇತ್ತು. ಎಲ್ಲ ಪ್ರಕರಣಗಳ ದಾಖಲೆ ಇರಲಿಲ್ಲ’’ ಎಂದಿದ್ದಾರೆ.

1985ರಲ್ಲಿ ಆರಂಭಗೊಂಡ ನರ್ಮದಾ ಬಚಾವೊ ಆಂದೋಲನದ ಸಂದರ್ಭ ಈ ಎಲ್ಲ ಪ್ರಕರಣಗಳನ್ನು ದಾಖಲಿಸಲಾಗಿವೆ. ಈ ಪ್ರಕರಣಗಳನ್ನು ನನ್ನ ವಿರುದ್ಧ ಮಾತ್ರ ದಾಖಲಿಸಿರುವುದು ಅಲ್ಲ. ದೊಡ್ಡ ಜನರ ಗುಂಪಿನ ವಿರುದ್ಧ ದಾಖಲಿಸಿರುವುದು ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News