ಈ ಐಎಎಸ್ ಪುತ್ರಿಗೆ ತಂದೆ ಮನೆಯನ್ನೇ ಖಾಲಿ ಮಾಡಿಸುವ ಹೊಣೆ!

Update: 2019-11-22 04:26 GMT
Photo: Hindustan Times

ಚಂಡೀಗಢ, ನ.22: ನಿವೃತ್ತ ಸರ್ಕಾರಿ ನೌಕರರ ಅಧಿಕೃತ ನಿವಾಸಗಳನ್ನು ತೆರವುಗೊಳಿಸುವ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಐಎಎಸ್ ಅಧಿಕಾರಿ, ಕೇಂದ್ರಾಡಳಿತ ಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ, ಕೇಂದ್ರ) ನಾಜೂಕ್ ಕುಮಾರ್ ಅವರಿಗೆ ಇದೀಗ ತಂದೆ, ಕೇಂದ್ರಾಡಳಿತ ಪ್ರದೇಶದ ಮಾಜಿ ಗೃಹ ಕಾರ್ಯದರ್ಶಿ ಅನಿಲ್ ಕುಮಾರ್ ಅವರ ಮನೆಯನ್ನೇ ಖಾಲಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸೆಕ್ಟರ್ 16ರ ವಸತಿ ಸೌಲಭ್ಯದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ಕಾರಣಕ್ಕಾಗಿ ತಂದೆ ಅನಿಲ್ ಕುಮಾರ್ ಅವರನ್ನು ಮನೆ ಖಾಲಿ ಮಾಡಿಸಬೇಕಿದೆ. ಇಲ್ಲಿ ಇನ್ನೂ ವಿಚಿತ್ರವೆಂದರೆ ಖಾಲಿ ಮಾಡಿಸಬೇಕಾದ ಮನೆಯ ಗೇಟ್‌ನಲ್ಲಿ ತಂದೆ ಹಾಗೂ ಮಗಳ ಇಬ್ಬರ ಹೆಸರೂ ಇದೆ. ವಾಸ್ತವವಾಗಿ ನಾಜೂಕ್ ಕುಮಾರ್ ಸೆಕ್ಟರ್ 7ರಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ.

ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮನೆ ಹಂಚಿಕೆ ಸಮಿತಿಯ ಕಾರ್ಯದರ್ಶಿ ನವೆಂಬರ್ 20ರಂದು ಬರೆದ ಪತ್ರದಲ್ಲಿ, ಜೂನ್‌ನಲ್ಲೇ ನಿವೃತ್ತರಾಗಿರುವ ಅನಿಲ್ ಕುಮಾರ್ ಅವರು ವಾಸವಿರುವ ಸೆಕ್ಟರ್ 16ರ ಮನೆಸಂಖ್ಯೆ 514ನ್ನು ಖಾಲಿ ಮಾಡಿಸುವಂತೆ ನಾಜೂಕ್ ಅವರಿಗೆ ಸೂಚಿಸಿದ್ದಾರೆ. ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಹಾಗೂ ಇತರ ಕೇಂದ್ರಾಡಳಿತ ಪ್ರದೇಶಗಳ ಕೇಡರ್ ಅಧಿಕಾರಿಯಾಗಿರುವ ನಾಜೂಕ್ ಅವರಿಗೆ ಮೊದಲ ನಿಯೋಜನೆಯಾಗಿ ಚಂಡೀಗಢ ನಗರಕ್ಕೆ ವರ್ಗಾಯಿಸಲಾಗಿದೆ.

ಅನಿಲ್ ಅವರಿಗೆ ಬರೆದ ಪತ್ರದಲ್ಲಿ, "2019ರ ಜೂನ್ 30ರಂದು ನೀವು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದು, ಮುಂದೆ ನಾಲ್ಕು ತಿಂಗಳವರೆಗೆ ಅಂದರೆ 2019ರ ಅಕ್ಟೋಬರ್ 31ರ ವರೆಗೆ ಸಾಮಾನ್ಯ ಲೈಸನ್ಸ್ ಶುಲ್ಕ ಪಾವತಿಸಿ ನೀವು ಅದರಲ್ಲಿ ವಾಸ ಇರಬಹುದಾಗಿದೆ. ನಿಮಗೆ ಮಾಡಿರುವ ಮನೆಹಂಚಿಕೆಯು ಕಾನೂನಾತ್ಮಕವಾಗಿ ನವೆಂಬರ್ 1ರಂದು ರದ್ದಾಗಿದೆ" ಎಂದು ಸ್ಪಷ್ಟಪಡಿಸಲಾಗಿದೆ.

ತಕ್ಷಣ ಮನೆ ಖಾಲಿ ಮಾಡಿ ನಿರ್ವಹಣೆ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಇದಕ್ಕೆ ವಿಫಲವಾದಲ್ಲಿ, ಮನೆ ಖಾಲಿ ಮಾಡಿಸಲಾಗುವುದು ಹಾಗೂ ಎಸ್‌ಡಿಎಂ ನಾಜೂಕ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಪತ್ರ ಇನ್ನೂ ನನ್ನ ಕೈಸೇರಿಲ್ಲ; ಕಾನೂನಾತ್ಮಕವಾಗಿ ಮನೆ ಖಾಲಿ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ನಾಜೂಕ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News