ಮಹಾರಾಷ್ಟ್ರ: ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರಕಾರ ರಚನೆ ಸನ್ನಿಹಿತ

Update: 2019-11-22 05:11 GMT

 ಮುಂಬೈ, ನ.22: ಮುಂಬೈನಲ್ಲಿ ಸತತ ಸಭೆಗಳ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರಕಾರ ರಚಿಸಲು ನಿರ್ಧರಿಸಲಾಗಿದ್ದು, ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹಾಗೂ ಕಾಂಗ್ರೆಸ್ ಪಕ್ಷಗಳು ಇಂದು ಮೈತ್ರಿಕೂಟದ ಕುರಿತು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.

ಮೂರು ಪಕ್ಷಗಳ ಮೈತ್ರಿಕೂಟಕ್ಕೆ ‘ಮಹಾರಾಷ್ಟ್ರ ವಿಕಾಸ್ ಅಘಾಡಿ(ಮಹಾರಾಷ್ಟ್ರ ಡವಲಪ್‌ಮೆಂಟ್ ಫ್ರೆಂಟ್) ಎಂದು ಹೆಸರಿಸಲಾಗಿದೆ. ಪೂರ್ಣ ಐದು ವರ್ಷಗಳಿಗೆ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿರಲು ತಾನು ಬಯಸಿದ್ದಾಗಿ ಶಿವಸೇನೆ ತಿಳಿಸಿದೆ. ಮುಖ್ಯಮಂತ್ರಿ ಹುದ್ದೆ ಕೂಡ ಸಮಾನವಾಗಿ ಹಂಚಿಕೆಯಾಗಬೇಕೆಂಬ ಬಗ್ಗೆ ಎನ್‌ಸಿಪಿ ಒಲವು ವ್ಯಕ್ತಪಡಿಸಿದೆ. ಮೊದಲ ಎರಡೂವರೆ ವರ್ಷ ಶಿವಸೇನೆಯವರು ಹಾಗೂ ಕೊನೆಯ ಎರಡೂವರೆ ವರ್ಷ ಎನ್‌ಸಿಪಿಗೆ ದೊರೆಯಬೇಕೆಂಬ ಬೇಡಿಕೆ ಇದೆ ಎನ್ನಲಾಗಿದೆ.

ಮೂರು ಪಕ್ಷಗಳ ನಾಯಕರು ಇಂದು ಮೊದಲ ಬಾರಿ ಒಟ್ಟಿಗೆ ಸೇರಿ ಚರ್ಚಿಸಲಿದ್ದು, ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಇದೇ ವೇಳೆ ಗುರುವಾರ ರಾತ್ರಿ ಶರದ್ ಪವಾರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿರುವ ಉದ್ದವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಸರಕಾರ ರಚನೆಯ ಸಂಬಂಧಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಶಿವಸೇನಾ ಹಾಗೂ ಎನ್‌ಸಿಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲುಸಿ)ಗುರುವಾರ ಅನುಮೋದನೆ ನೀಡಿದೆ.

ಬಹುಶಃ ಶುಕ್ರವಾರವೇ ಅಂತಿಮ ನಿರ್ಧಾರ ಸಾಧ್ಯವಾಗಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News