ಟಿಆರ್‌ಎಸ್ ಶಾಸಕನ ಪೌರತ್ವ ರದ್ದತಿ ಆದೇಶಕ್ಕೆ ಉಚ್ಚ ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆ

Update: 2019-11-22 15:42 GMT

ಹೈದರಾಬಾದ್, ನ.22: ಟಿಆರ್‌ಎಸ್ ಶಾಸಕ ರಮೇಶ ಚೆನ್ನಮನೆನಿ ಅವರ ಪೌರತ್ವವನ್ನು ರದ್ದುಗೊಳಿಸಿ ಕೇಂದ್ರ ಗೃಹ ಸಚಿವಾಲಯವು ಹೊರಡಿಸಿದ್ದ ಆದೇಶಕ್ಕೆ ತೆಲಂಗಾಣ ಉಚ್ಚ ನ್ಯಾಯಾಲಯವು ಗುರುವಾರ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.16ಕ್ಕೆ ನಿಗದಿಗೊಳಿಸಲಾಗಿದೆ. ಚೆನ್ನಮನೆನಿ ಅವರು ಕಳೆದ ವರ್ಷ ವೇಮುಲವಾಡಾ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದರು.

ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಕೆಯ ಮೊದಲಿನ ಒಂದು ವರ್ಷದ ಅವಧಿಯಲ್ಲಿ ವಿದೇಶಗಳಿಗೆ ತನ್ನ ಭೇಟಿಗಳ ಕುರಿತು ಸತ್ಯಾಂಶಗಳನ್ನು ಬಚ್ಚಿಟ್ಟಿದ್ದಕ್ಕಾಗಿ ಟಿಆರ್‌ಎಸ್ ಶಾಸಕ ರಮೇಶ ಚೆನ್ನಮನೆನಿ ಅವರ ಪೌರತ್ವವನ್ನು ರದ್ದುಗೊಳಿಸಿ ಕೇಂದ್ರ ಗೃಹ ಸಚಿವಾಲಯವು ಬುಧವಾರ ಹೊಸದಾಗಿ ಆದೇಶವನ್ನು ಹೊರಡಿಸಿತ್ತು. ಚೆನ್ನಮನೆನಿ ಜರ್ಮನ್ ಪ್ರಜೆಯಾಗಿದ್ದಾರೆ ಮತ್ತು ಭಾರತೀಯ ಪೌರತ್ವವನ್ನು ಕೋರಲು ಅಗತ್ಯ ಮಾನದಂಡಗಳನ್ನು ಪೂರೈಸಿಲ್ಲ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

ಚೆನ್ನಮನೆನಿ ತಪ್ಪು ಮಾಹಿತಿಗಳನ್ನು ಒದಗಿಸಿದ್ದು ಮತ್ತು ಸತ್ಯಾಂಶಗಳನ್ನು ಬಚ್ಚಿಟ್ಟಿದ್ದು ಸರಕಾರವು ಅವರಿಗೆ ಪೌರತ್ವವನ್ನು ಮಂಜೂರು ಮಾಡುವ ತಪ್ಪುನಿರ್ಧಾರವನ್ನು ಕೈಗೊಳ್ಳಲು ಕಾರಣವಾಗಿತ್ತು ಎಂದು ತನ್ನ ಆದೇಶದಲ್ಲಿ ತಿಳಿಸಿರುವ ಸಚಿವಾಲಯವು,ಅರ್ಜಿ ಸಲ್ಲಿಕೆಗೆ ಮೊದಲಿನ ಒಂದು ವರ್ಷ ತಾನು ಭಾರತದಲ್ಲಿ ವಾಸವಾಗಿರಲಿಲ್ಲ ಎಂದು ಅವರು ತಿಳಿಸಿದ್ದರೆ ಸಚಿವಾಲಯದಲ್ಲಿನ ಸಕ್ಷಮ ಪ್ರಾಧಿಕಾರವು ಅವರಿಗೆ ಪೌರತ್ವವನ್ನು ಮಂಜೂರು ಮಾಡುತ್ತಿರಲಿಲ್ಲ. ಪ್ರಾಧಿಕಾರವು ತನ್ನ ಅಧಿಕಾರವನ್ನು ಬಳಸಿಕೊಂಡು ಅವರ ಪೌರತ್ವವನ್ನು ರದ್ದುಗೊಳಿಸಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News