ಅಮೆರಿಕ ಜೊತೆ ವ್ಯಾಪಾರ ಒಪ್ಪಂದ ಬೇಕು ಆದರೆ, ಅಗತ್ಯ ಬಿದ್ದಾಗ ತಿರುಗಿ ಬೀಳುತ್ತೇವೆ: ಚೀನಾ ಅಧ್ಯಕ್ಷ

Update: 2019-11-22 15:50 GMT

ಬೀಜಿಂಗ್, ನ. 22: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವೊಂದನ್ನು ಹೊಂದಲು ಚೀನಾ ಬಯಸುತ್ತದೆ, ಆದರೆ ಅಗತ್ಯವಾದರೆ ತಿರುಗಿ ಬೀಳಲೂ ಚೀನಾ ಹಿಂಜರಿಯುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಹೇಳಿದ್ದಾರೆ.

ವ್ಯಾಪಾರ ಸಮರದ ಬಗ್ಗೆ ಚೀನಾ ಅಧ್ಯಕ್ಷರು ನೇರವಾಗಿ ಮಾತನಾಡಿದ್ದು ಅಪರೂಪ. ಅದೇ ವೇಳೆ, ಈ ವರೆಗೆ ನಡೆದ ಮಾತುಕತೆಗಳಲ್ಲಿ ಚೀನಾವು ಸಾಕಷ್ಟು ವಿನಾಯಿತಿಗಳನ್ನು ನೀಡಿಲ್ಲ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ ಎರಡು ದಿನಗಳ ಬಳಿಕ ಚೀನಾ ಅಧ್ಯಕ್ಷರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಹಾನಿಕಾರಕ ವ್ಯಾಪಾರ ಸಮರದಲ್ಲಿ ತೊಡಗಿವೆ. ಎರಡೂ ದೇಶಗಳು ಪರಸ್ಪರರ ನೂರಾರು ಬಿಲಿಯ ಡಾಲರ್ ವೌಲ್ಯದ ಸರಕುಗಳ ಮೇಲೆ ದಂಡನಾತ್ಮಕ ಶುಲ್ಕಗಳನ್ನು ವಿಧಿಸುವ ಮೂಲಕ ಸರಾಗ ವ್ಯಾಪಾರದ ಮೇಲೆ ನಿಷೇಧ ಹೇರಿವೆ. ‘‘ನಾವು ಯಾವಾಗಲೂ ಹೇಳುತ್ತಾ ಬಂದಿರುವಂತೆ, ನಾವು ವ್ಯಾಪಾರ ಸಮರವನ್ನು ಆರಂಭಿಸಲು ಬಯಸುವುದಿಲ್ಲ. ಆದರೆ, ನಾವು ಹೆದರುವುದಿಲ್ಲ’’ ಎಂದು ಅವರು ಹೇಳಿದರು.

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿರುವ ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ಅಮೆರಿಕದ ಮಾಜಿ ಅಧಿಕಾರಿಗಳು ಮತ್ತು ಇತರ ವಿದೇಶಿ ಗಣ್ಯರೊಂದಿಗೆ ನಡೆದ ಸಭೆಯಲ್ಲಿ ಚೀನಾ ಅಧ್ಯಕ್ಷರು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News