ನಿತ್ಯಾನಂದನ ಪತ್ತೆಗೆ ವಿದೇಶಾಂಗ ಸಚಿವಾಲಯದ ನೆರವು ಕೇಳಿದ ಗುಜರಾತ್ ಪೊಲೀಸರು

Update: 2019-11-22 17:37 GMT

ಅಹ್ಮದಾಬಾದ್, ನ.22: ಅಪ್ರಾಪ್ತ ವಯಸ್ಕರ ಅಪಹರಣ ಪ್ರಕರಣದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದನ ಪತ್ತೆಗಾಗಿ ತಾವು ವಿದೇಶಾಂಗ ಸಚಿವಾಲಯ ಹಾಗೂ ತನಿಖಾಸಂಸ್ಥೆಗಳ ಜೊತೆ ಸಂಪರ್ಕದಲ್ಲಿರುವುದಾಗಿ ಗುಜರಾತ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ನಿತ್ಯಾನಂದ ದೇಶಬಿಟ್ಟು ಪಲಾಯನಗೈದಿದ್ದಾನೆಂದು ಗುಜರಾತ್ ಪೊಲೀಸರು ನಿನ್ನೆ ಹೇಳಿಕೆ ನೀಡಿದ್ದರು.

‘‘ಸ್ವಘೋಷಿತ ದೇವಮಾನವನ ಪತ್ತೆಗಾಗಿ ನಾವು ತನಿಖಾ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದೇವೆ ’’ ಎಂದು ಅಹ್ಮದಾಬಾದ್‌ನ ಗ್ರಾಮೀಣ ಪೊಲೀಸ್ ಆಯುಕ್ತ ಆರ್.ವಿ. ಅಸಾರಿ ತಿಳಿಸಿದ್ದಾರೆ ವಿದೇಶಾಂಗ ಸಚಿವಾಲಯದ ಜೊತೆಗೂ ತಾವು ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಗುರುವಾರ ವಿದೇಶಾಂಗ ಇಲಾಖೆಯು ನಿತ್ಯಾನಂದ ದೇಶದಿಂದ ಪಲಾಯನಗೈದಿರುವ ಬಗ್ಗೆ ಗುಜರಾತ್ ಪೊಲೀಸರಿಂದಾಗಲಿ ಅಥವಾ ಗೃಹ ಸಚಿವಾಲಯದಿಂದಾಗಲಿ ತನಗೆ ಯಾವುದೇ ಮಾಹಿತಿ ದೊರೆತಿಲ್ಲವೆಂದು ತಿಳಿಸಿತ್ತು. ನಿತ್ಯಾನಂದನನ್ನು ಗಡಿಪಾರು ಮಾಡುವ ಬಗ್ಗೆ ಆಯಾ ದೇಶವನ್ನು ಕೋರಬೇಕೆಂದಿದ್ದರೆ ಆ ವ್ಯಕ್ತಿ ತಲೆಮರೆಸಿಕೊಂಡಿರುವ ಸ್ಥಳವನ್ನು ಉಲ್ಲೇಖಿಸಬೇಕಾದ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಮಧ್ಯೆ ನಿತ್ಯಾನಂದನ ಇಬ್ಬರು ಶಿಷ್ಯರಾದ ಪಾಣಿಪ್ರಿಯಾನಂದ ಹಾಗೂ ರಿದ್ಧಿ ಕಿರಣ್ ಅವರನ್ನು ಗುಜರಾತ್ ಪೊಲೀಸರು ಮಂಗಳವಾರ ಬಂಧಿಸಿದ್ದು ಅವರ ವಿರುದ್ಧ ಅಪ್ರಾಪ್ತ ವಯಸ್ಕರ ಅಪಹರಣ, ಹಲ್ಲೆ ಹಾಗೂ ಅಕ್ರಮ ಬಂಧನದ ಆರೋಪವನ್ನು ಹೊರಿಸಲಾಗಿದೆ. ಅಹ್ಮದಾಬಾದ್‌ನ ಗ್ರಾಮೀಣ ನ್ಯಾಯಾಲಯವು ಬುಧವಾರ ಸಂಜೆ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಈ ಶಿಷ್ಯರು, ಅಹ್ಮದಾಬಾದ್‌ನಿಂದ 50 ಕಿ.ಮೀ. ದೂರದ ಹಿರಾಪುರ್‌ನ ಆಶ್ರಮವನ್ನು ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ ಹಾಗೂ ಅವರನ್ನು ಅಪಾರ್ಟ್‌ಮೆಂಟ್ ಒಂದರಲ್ಲಿ ಹತ್ತು ದಿನಗಳಿಗೂ ಅಧಿಕ ಸಮಯ ದುಡಿಸಲಾಗಿತ್ತು. ಈ ಇಬ್ಬರು ಆರೋಪಿಗಳ ವಿರುದ್ಧ ಇತರ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಕೂಡಾ ದೋಷಾರೋಪ ಮಾಡಿದ್ದರು. ಈ ಮಕ್ಕಳ ಹೆತ್ತವರು ದೂರುಗಳನ್ನು ಸಲ್ಲಿಸಿದ ಬಳಿಕ ಪೊಲೀಸರು ಆಶ್ರಮಕ್ಕೆ ದಾಳಿ ನಡೆಸಿ ಈ ಇಬ್ಬರು ಮಕ್ಕಳನ್ನು ರಕ್ಷಿಸಿದ್ದರು.

ಈ ಮಧ್ಯೆ ಗುಜರಾತ್ ಪೊಲೀಸರು, ಹೀರಾಪುರ್‌ನಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ನಿತ್ಯಾನಂದ ಆಶ್ರಮಕ್ಕೆ ಶಾಲೆಯ ಜಮೀನನ್ನು ಲೀಸ್‌ಗೆ ನೀಡುವ ಮೂಲಕ ಪ್ರಾಂಶುಪಾಲ ಹಿತೇಶ್ ಪುರಿ ಅವರು ಸರಕರಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನಿತ್ಯಾನಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವುದು ಇದು ಮೊದಲೇನಲ್ಲ. 2018ರ ಜೂನ್‌ನಲ್ಲಿ ಬೆಂಗಳೂರಿನ ನ್ಯಾಯಾಲಯವೊಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ದೋಷಾರೋಪ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News