ಹಾಸ್ಟೆಲ್ ಶುಲ್ಕ ಏರಿಕೆ ಸಮರ್ಥಿಸಿದ ಜೆಎನ್‌ಯು

Update: 2019-11-22 17:39 GMT

ಹೊಸದಿಲ್ಲಿ, ನ.23: ಹಾಸ್ಟೆಲ್ ಶುಲ್ಕಗಳಲ್ಲಿ ಏರಿಕೆ ಮಾಡುವ ತನ್ನ ನಡೆಯನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು ಗುರುವಾರ ಸಮರ್ಥಿಸಿ ಕೊಂಡಿದೆ. ವಿಶ್ವವಿದ್ಯಾನಿಲಯವು 45 ಕೋಟಿ ರೂ.ಗೂ ಅಧಿಕ ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವುದರಿಂದ ಹಾಸ್ಟೆಲ್ ಶುಲ್ಕ ಏರಿಕೆ ಅನಿವಾರ್ಯವಾಗಿದೆಯೆಂದು ಅದು ಹೇಳಿದೆ. ಜೆಎನ್‌ಯುವಿನ ಹಾಸ್ಟೆಲ್ ಶುಲ್ಕಗಳ ಏರಿಕೆಯನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

‘‘ಅಗಾಧವಾದ ವಿದ್ಯುತ್ ಹಾಗೂ ನೀರಿನ ಶುಲ್ಕ ಹಾಗೂ ಗುತ್ತಿಗೆ ಆದಾರಿತ ಸಿಬ್ಬಂದಿಯ ವೇತನದ ಕಾರಣಗಳಿಂದಾಗಿ ವಿಶ್ವವಿದ್ಯಾನಿಲಯವು 45 ಕೋಟಿ ರೂ.ಗೂ ಅಧಿಕ ವಿತ್ತೀಯ ಕೊರತೆಯನ್ನು ಎದುರಿಸುತ್ತಿದೆ ’’ಎಂದು ಜೆಎನ್‌ಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಾಸ್ಟೆಲ್ ಶುಲ್ಕ ಏರಿಕೆಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡುವ ಅಭಿಯಾನವನ್ನು ಕೆಲವರು ನಡೆಸುತ್ತಿದ್ದಾರೆಂದು ಅದು ಆಪಾದಿಸಿದೆ.

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಗುತ್ತಿಗೆಯಾಧಾರಿ ಉದ್ಯೋಗಿಗಳಿಗೆ ವೇತನ ನಿಧಿಯಿಂದ ಸಂಬಳ ಪಾವತಿಸಲು ಈಗ ಅವಕಾಶ ನೀಡುತ್ತಿಲ್ಲವೆಂದು ಜೆಎನ್‌ಯು ಆಡಳಿತಮಂಡಳಿಯ ಹೇಳಿಕೆ ತಿಳಿಸಿದೆ. ವಿಶ್ವವಿದ್ಯಾನಿಲಯವು ಸಂಪಾದಿಸುವ ಅಂತರಿಕ ಶುಲ್ಕಗಳಿಂದಲೇ ವೇತನದಿಂದ ಹೊರತಾದ ಖರ್ಚುಗಳನ್ನು ನಿಭಾಯಿಸಬೇಕೆಂದು ಯುಜಿಸಿ ಸೂಚನೆಗಳನ್ನು ನೀಡಿದೆ ಎಂದು ಅದು ತಿಳಿಸಿದೆ. ವಿದ್ಯಾರ್ಥಿಗಳಿಂದ ಸೇವಾ ಶುಲ್ಕಗಳನ್ನು ಸಂಗ್ರಹಿಸದೆ ವಿವಿಗೆ ಬೇರೆ ಪರ್ಯಾಯ ದಾರಿಯಿಲ್ಲವೆಂದು ಜೆಎನ್‌ಯು ಆಡಳಿತ ಮಂಡಳಿ ತಿಳಿಸಿದೆ.

ಇತರ ವಿಶ್ವವಿದ್ಯಾನಿಲಯಗಳ ಹಾಗೆ ಜೆಎನ್‌ಯು ಅಭಿವೃದ್ಧಿ ಶುಲ್ಕಗಳನ್ನು ತನ್ನ ವಿದ್ಯಾರ್ಥಿಗಳು ವಿಧಿಸುತ್ತಿಲ್ಲವೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕಿಂತಲೂ ಹೆಚ್ಚಾಗಿ, ಜೆಎನ್‌ಯುವಿನ ಪ್ರವೇಶಾತಿ ಶುಲ್ಕವು ಕಳೆದ ಕೆಲವು ದಶಕಗಳಲ್ಲಿಯೇ ಅತ್ಯಂತ ಕನಿಷ್ಠವಾದುದಾಗಿದೆ ಹಾಗೂ ಕಳೆದ ನಾಲ್ಕು ದಶಕಗಳಲ್ಲಿ ಆ ಬಗ್ಗೆ ಯಾವುದೇ ಪರಿಷ್ಕರಣೆಯನ್ನು ನಡೆಸಲಾಗಿಲ್ಲವೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News