ವಿಂಡೀಸ್ ವಿರುದ್ಧ ಟಿ-20: ಪಂದ್ಯಗಳ ದಿನಾಂಕ ಅದಲು-ಬದಲು

Update: 2019-11-22 18:03 GMT

ಮುಂಬೈ, ನ.22: ವೆಸ್ಟ್‌ಇಂಡೀಸ್ ವಿರುದ್ಧ ಭಾರತ ತಂಡ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಆಡಲಿರುವ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ಅದಲು-ಬದಲು ಮಾಡಿದೆ. ಮುಂಬೈ ನಗರ ಮೊದಲ ಪಂದ್ಯದ ಬದಲಿಗೆ ಡಿ.11ರಂದು ನಡೆಯಲಿರುವ ಮೂರನೇ ಹಾಗೂ ಕೊನೆಯ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದ್ದು, ಡಿ.6ರಂದು ಮೊದಲ ಪಂದ್ಯದ ಆತಿಥ್ಯದ ಅವಕಾಶ ಹೈದರಾಬಾದ್ ನಗರದ ಪಾಲಾಗಿದೆ.

ಡಿ.6ರಂದು ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕ ದಿನ ಹಾಗೂ ಬಿ.ಆರ್.ಅಂಬೇಡ್ಕರ್ ಮಹಾನಿರ್ವಾಣ ದಿನವಾಗಿರುವ ಕಾರಣ ನಗರದಲ್ಲಿ ಹೈ ಅಲರ್ಟ್ ಜಾರಿ ಇರಲಿದೆ.ಹೀಗಾಗಿ ಮೊದಲ ಟ್ವೆಂಟಿ-20 ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದರು.

‘‘ಮುಂಬೈ(ಡಿ.6)ಹಾಗೂ ಹೈದರಾಬಾದ್(ಡಿ.11) ಪಂದ್ಯಗಳ ದಿನಾಂಕವನ್ನು ಅದಲು-ಬದಲು ಮಾಡಲು ಬಿಸಿಸಿಐ ಒಪ್ಪಿಕೊಂಡಿದೆ. ಎಚ್‌ಸಿಎ ಅಧ್ಯಕ್ಷ ಮುಹಮ್ಮದ್ ಅಝರುದ್ದೀನ್ ಸಮ್ಮತಿಯ ಮೇರೆಗೆ ನಮಗೆ ಇದು ಸಾಧ್ಯವಾಗಿದೆ’’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಮುಂಬೈ ಕ್ರಿಕೆಟ್‌ಸಂಸ್ಥೆ ಒಂದುಪಂದ್ಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ಎಚ್‌ಸಿಎ ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಪಂದ್ಯಗಳ ಅದಲು-ಬದಲಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.

ಇದೀಗ ದಿನಾಂಕ ವಿನಿಮಯವಾಗಿರುವ ಹಿನ್ನೆಲೆಯಲ್ಲಿ 3ಪಂದ್ಯಗಳ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ಆಡಲಾಗುತ್ತದೆ. ಕೊನೆಯ ಪಂದ್ಯ ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಂಸಿಎ 2017ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯದ ಆತಿಥ್ಯವಹಿಸಿಕೊಂಡಿತ್ತು. ಕಳೆದ ವರ್ಷ ಎಂಸಿಎಯಲ್ಲಿನ ಆಡಳಿತಾತ್ಮಕ ಕಾರಣದಿಂದ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ಮುಂಬೈನ ಮತ್ತೊಂದು ಸ್ಟೇಡಿಯಂ ಬ್ರೆಬೋರ್ನ್‌ಗೆ ಸ್ಥಳಾಂತರಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News