×
Ad

ಮರಳದ ಬಾಲ್ಯದ ಸಮಯ...

Update: 2019-11-23 20:41 IST

ನೆನಪುಗಳೇ ಹಾಗೆ ಒಮ್ಮೆ ಸುಮ್ಮನಿದ್ದರೆ ಇನ್ನೊಮ್ಮೆ ಬಹಳ ಸದ್ದು ಮಾಡುತ್ತವೆ. ಈ ನೆನಪಿನ ಪುಸ್ತಕದ ಹಾಳೆಯಲ್ಲಿ ಗೀಚಿದ ಹೆಜ್ಜೆಯ ಗುರುತುಗಳು ಸದಾ ಮನದಾಳದಲ್ಲಿ ಸಂಗೀತದ ಸುಧೆಯನ್ನು ಗುನುಗುತ್ತಲೇ ಇರುತ್ತವೆ. ಚಿಕ್ಕವರಿದ್ದಾಗ ಹೋದ ಅಂಗನವಾಡಿ, ಸರಕಾರಿ ಪ್ರಾಥಮಿಕ ಶಾಲೆ, ಮನೆಯಲ್ಲಿ ಟಿವಿ ಇಲ್ಲದ ಸಮಯದಲ್ಲಿ ಬೇರೆಯವರ ಮನೆಯಲ್ಲಿ ಕುಳಿತು ಟಿವಿ ನೋಡಿದ ನೆನಪು, ಸೈಕಲ್ ಕಲಿತದ್ದು, ಹಬ್ಬಕ್ಕೆ ಹೊಸ ಬಟ್ಟೆ ತಂದಾಗ ಆಗುವ ಸಂತೋಷ, ಅಪ್ಪನ ಜೊತೆಗೂಡಿ ಮದುವೆ ಸಮಾರಂಭಗಳಿಗೆ ಹೋದದ್ದು, ಶಾಲೆಗೆ ರಜೆ ದೊರೆತಾಗ ಗೆಳೆಯರ ಜೊತೆಗೂಡಿ ಗದ್ದೆಗಳಿಗೆ ತೆರಳಿ ಹಣ್ಣುಗಳನ್ನು ಕದ್ದು ತಿಂದದ್ದು, ಬೇಸಿಗೆ ರಜೆಯಲ್ಲಿ ಬಾವಿಗಳಲ್ಲಿ ಹೋಗಿ ಈಜು ಕಲಿತದ್ದ್ದು, ಇದರ ಜೊತೆಗೆ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಚಿನ್ನಿ ದಾಂಡು, ಗೋಲಿ, ಬುಗುರಿ, ಮಾವಿನ ಕಾಯಿಯ ವಾಟೆ ಆಡಿರುವುದು, ಮರಕೋತಿ ಆಟ, ಕಬಡ್ಡಿ ಹೀಗೆ ಅನೇಕ ಆಟಗಳು ಇಂದಿಗೂ ಕಣ್ಣ ಮುಂದೆ ಹಾಗೇಯೇ ಬಂದಂತಹ ಅನುಭವ.

ಪ್ರಸಕ್ತ ದಿನಗಳಲ್ಲಿ ನೋಡಿದರೆ ಈ ಯಾವ ಆಟಗಳಾಗಲೀ, ಹೊಸ ಉಡುಪಿನ ಸಂತೋಷವಾಗಲೀ, ಶಾಲೆಯ ಸಮಯವಾಗಲೀ ಈಗ ಮರಳಿ ಬಾರದು. ಇದರ ಸಂತೋಷವೇ ಬೇರೆಯಾಗಿತ್ತು. ಆದರೆ ಈಗಿನ ಮಕ್ಕಳ ಶಿಕ್ಷಣವಾಗಲೀ, ಆಟಗಳಾಗಲೀ, ಈಜು ಕಲಿತದ್ದು ಆಗಲಿ ಈಗ ಅದರ ಖುಷಿ ಸಿಗುವುದಿಲ್ಲ. ಇತ್ತಿಚೀನ ವಾತಾವರಣದಲ್ಲಿ ಗ್ರಾಮೀಣ ಕ್ರೀಡೆಗಳು ನೋಡಲು ಸಿಗುತ್ತಿಲ್ಲ. ಮೊಬೈಲ್, ಬೈಕ್, ಟಿವಿ, ಕಂಪ್ಯೂಟರ್ ಹೀಗೆ ಅಂತರ್ಜಾಲದ ಮೋಹಗಳಿಗೆ ಬಲಿಯಾಗುತ್ತಿದ್ದಾರೆ.ಹಿಂದಿನ ಕಾಲದಲ್ಲಿ ಇಂಟರ್‌ನೆಟ್ ಸೌಲಭ್ಯ ಇರಲಿಲ್ಲ. ಬೈಕ್ ಇರಲಿಲ್ಲ. ಅಂದು ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಶಿಕ್ಷಣ ಹಾಗೂ ಶಿಕ್ಷಕರು ಹೇಳಿಕೊಡುವ ಪಾಠಗಳು ಇದರ ಜೊತೆಗೆ ಹೋಂವರ್ಕ್, ಶಾಲೆಯ ಕೆಲಸಗಳು ಬಹಳ ಖುಷಿಯಿಂದ ಮಾಡುತ್ತಿದ್ದೆವು. ಶಾಲೆಯ ಆವರಣದಲ್ಲಿ ಕುಳಿತು ಪಾಠ ಕಲಿತದ್ದು, ಎಲ್ಲ ಸ್ನೇಹಿತರ ಜೊತೆಯಲ್ಲಿ ಕೂಡಿ ಆಟ ಆಡಿರುವುದು. ಮಧ್ಯಾಹ್ನದ ಬಿಸಿಯೂಟ ತಿನ್ನುವುದೆಂದರೆ ಒಂದು ರೀತಿಯ ರುಚಿಕರ. ಶಾಲೆಗೆ ಹೊಸ ಪಠ್ಯ ಪುಸ್ತಕಗಳು ಬಂದಾಗ ಆಗುವ ಸಂತೋಷ. ಆ ಪುಸ್ತಕಗಳು ನಮಗೆ ಯಾವಾಗ ಕೊಡುತ್ತಾರೆ ಎನ್ನುವ ಹಂಬಲ ನಮ್ಮಲ್ಲಿ ಕಾಡುತ್ತಿತ್ತು. ಆ ಪುಸ್ತಕಗಳು ಸಿಕ್ಕಾಗ ಆಗುವ ಖುಷಿ ಈಗ ಏನು ಕೊಟ್ಟರೂ ಸಿಗುವುದಿಲ್ಲ. ಸೈಕಲ್ ಕಲಿಯುವಾಗ ಎಡವಿ ಬಿದ್ದು ನೋವು ಅನುಭವಿಸಿದ್ದಕ್ಕಿಂತ ಮನೆಯಲ್ಲಿ ಬೈಗುಳ ತಿಂದದ್ದು ಹೆಚ್ಚು. ಸೈಕಲ್ ಹೊಡೆಯುವುದೆಂದರೆ ಒಂಥರಾ ಮಜಾ ಬೇರೇನೆ. ಮನೆಯಲ್ಲಿ ಸೈಕಲ್ ಸಿಗದಿದ್ದಾಗ ಅಮ್ಮನ ಜೊತೆಯಲ್ಲಿ ಹಟ ಮಾಡಿ ಒಂದು ರೂಪಾಯಿ ತೆಗೆದುಕೊಂಡು ಬಾಡಿಗೆ ಸೈಕಲ್ ನಡೆಸಿದ್ದು. ಆಗ ನಮಗೆ ಸಮಯ ಕಳೆಯಲು ಬೇಕಾದ ರೀತಿಯ ಕ್ರೀಡೆಗಳನ್ನು ನಾವೇ ನೋಡಿಕೊಳ್ಳುತ್ತಿದ್ದೆವು.

ರವಿವಾರ ಬಂತೆಂದರೆ ಮುಗಿಯಿತು. ರಜೆಯ ಸಮಯದಲ್ಲಿ ಬೆಳಗ್ಗೆಯಿಂದ ಆಟ ಆಡಲು ಹೋದರೆ ಸಂಜೆಯೇ ಮನೆಗೆ ಹಿಂದಿರುಗುವುದು. ಗೋಲಿ ಆಡುವುದು, ಬುಗುರಿ, ಮರಕೋತಿ ಆಟ ಆಡುವುದು, ಗದ್ದೆಗಳಿಗೆ ಹೋಗಿ ಸಮಯ ಕಳೆಯುವುದು, ಈಜುವುದು, ಪಕ್ಕದ ಮನೆಯಲ್ಲಿ ಹೋಗಿ ಟಿವಿ ನೋಡುವುದು ಅದು ಒಂದು ರೀತಿಯ ಆನಂದ ಸಮಯವಾಗಿರುತ್ತಿತ್ತು. ದಿನದ ಖರ್ಚಿಗಾಗಿ ಒಂದು ಅಥವಾ ಎರಡು ರೂಪಾಯಿ ಕೊಟ್ಟರೆ ಅಂದು ನಮ್ಮ ಮುಖದಲ್ಲಿ ಆನಂದ ಕಳೆ ಕಾಣುತ್ತಿತ್ತು. ಆ ಹಣದಲ್ಲಿ ತಿನ್ನಲು ಅನೇಕ ರೀತಿಯ ವಸ್ತುಗಳು ನಮಗೆ ಸಿಗುತ್ತಿ ದ್ದವು. ಇಂದು ಒಂದು ರೂಪಾಯಿಗೆ ಬೆಲೆನೇ ಇಲ್ಲ. ಅಜ್ಜ-ಅಜ್ಜಿಗೆ ನಾವೆಂದರೆ ಬಹಳ ಪ್ರೀತಿ. ಅವರು ನಮ್ಮನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಆ ಅಜ್ಜ-ಅಜ್ಜಿಯರ ಪ್ರೀತಿ ಇಂದು ಕಾಣಲು ಸಾಧ್ಯ ಇಲ್ಲ.

ವರ್ಷದಲ್ಲಿ ಒಂದು ಬಾರಿ ಹಬ್ಬಕ್ಕೆ ಹೊಸ ಬಟ್ಟೆ ತಂದಾಗ ಆಗುವ ಆನಂದ ಈಗ ಏನು ಕೊಟ್ಟರೂ ಬಾರದು. ಏಕೆಂದರೆ ಇಂದಿನ ಯುವಕರು ವರ್ಷದಲ್ಲಿ ಹತ್ತಾರು ಜೊತೆ ಬಟ್ಟೆ ತೆಗೆದುಕೊಳ್ಳುತ್ತಾರೆ. ಅವರಿಗೆ ಯಾವ ರೀತಿಯ ಸಂತೋಷವೇ ಆಗುವುದಿಲ್ಲ. ಅಪ್ಪ-ಅಮ್ಮನ ಜೊತೆಯಲ್ಲಿ ಮದುವೆ ಸಮಾರಂಭಗಳಿಗೆ ಹೋಗುವುದೆಂದರೆ ಅದೊಂದು ಥರಾ ಸಂತೋಷವೇ ಬೇರೆಯಾಗಿರುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಶಾಲೆಗೆ ಚಕ್ಕರ್ ಹೊಡೆದದ್ದು. ಊರಿನ ಬೀದಿಗಳಲ್ಲಿ ಹರಟೆ ಹೊಡೆದು ಮನೆಯಲ್ಲಿ ಬೈಗುಳ ತಿಂದದ್ದು, ಮನೆಯಲ್ಲಿ ಸಂಜೆಯ ಊಟ ಕೊಡದಿರುವುದು. ಮನೆಯಲ್ಲಿ ಏನಾದರೂ ರುಚಿಕರ ವಸ್ತುಗಳು ತಂದು ಕೊಟ್ಟಾಗ ಆಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ನಮಗೆ ಶಾಲೆ ಅಥವಾ ಟ್ಯೂಷನ್ ಬಗ್ಗೆ ಆಗಲೀ ಯಾವುದೇ ರೀತಿಯ ಒತ್ತಡ ಇರಲಿಲ್ಲ. ಆದರೆ ಇಂದು ಪೋಷಕರು ತಮ್ಮ ಮಕ್ಕಳಿಗೆ ಟ್ಯೂಷನ್ ಅದು ಇದು ಅಂತ ಒತ್ತಡ ಹೇರುತ್ತಿದ್ದಾರೆ. ನಮಗೆ ಪಾಠ ಮಾಡಿದ ಶಿಕ್ಷಕರು ಇಂದು ಎಲ್ಲಿಯೂ ಸಿಗುವು ದಿಲ್ಲ. ಆ ಶಿಕ್ಷಕರು ಪಾಠ ಮಾಡಲು ಬಂದರೆ ನಮ್ಮಲ್ಲಿ ಒಂಥರಾ ಕಳೆ ಕಾಣುತ್ತಿತ್ತು. ಆಟದ ಜೊತೆ ಪಾಠ. ಪಾಠದ ಜೊತೆ ಆನಂದ. ನಮ್ಮದು ಅವಿಭಕ್ತ ಕುಟುಂಬ. ಮನೆಯಲ್ಲಿ ಯಾವುದೇ ಒಂದು ಹಬ್ಬ ಬಂದಾಗ ಎಲ್ಲರೂ ಸೇರಿ ಸಡಗರದಿಂದ ಹಬ್ಬ ಆಚರಿಸುವುದು. ರಮಝಾನ್ ತಿಂಗಳು ಬಂತೆಂದರೆ ನಮಗೆ ಖುಷಿಯೋ ಖುಷಿ. ಏಕೆಂದರೆ ಎಲ್ಲರೂ ಸೇರಿ ರಮಝಾನ್ ತಿಂಗಳಿನ ಒಂದು ತಿಂಗಳ ಉಪವಾಸ ಮಾಡುವುದು ಅದೊಂಥರಾ ಮಜಾನೇ ಬೇರೆಯಾಗಿರುತ್ತಿತ್ತು. ಅದರ ಜೊತೆಗೆ ಮನೆಯವರೆಲ್ಲರಿಗೂ ಸೇರಿ ಹಬ್ಬದ ಸಲುವಾಗಿ ಬಟ್ಟೆ ತರುತ್ತಾರೆ ಎಂದರೆ ಬಹಳ ಆನಂದವಾಗುತ್ತಿತ್ತು. ಅದೊಂದು ದಿನ ಹಬ್ಬದ ಕಳೆಯೇ ಬೇರೆಯಾಗಿರುತ್ತಿತ್ತು. ಅವತ್ತು ಮನೆಯಲ್ಲಿ ಸಡಗರದಿಂದ ಹಬ್ಬದ ಸಲುವಾಗಿ ಹೊಸ ಬಟ್ಟೆ ಧರಿಸುವುದು, ಒಬ್ಬರಿಗೊಬ್ಬರು ಪರಸ್ಪರ ಅಪ್ಪಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವುದು. ರಮಝಾನ್ ತಿಂಗಳು ಎಂದರೆ ಎಲ್ಲರೂ ಸೇರಿ ಹಬ್ಬ ಮಾಡುವುದು ಅದೊಂದು ರೀತಿಯ ಒಡನಾಡಿಗಳ ಬೆಸುಗೆಯ ವಾತಾವರಣ ಒಡಮೂಡಿ ಬರುತ್ತಿತ್ತು.

ಇಂದು ಯಾವುದೇ ಹಬ್ಬಗಳಿಗೆ ಮೊದಲಿನ ಕಳೆಯೇ ಇಲ್ಲ. ಯಾಕೆಂದರೆ ಎಲ್ಲರೂ ಶಾಲೆ-ಕಾಲೇಜು, ಆಫೀಸ್, ಕೆಲಸ ಅಂತ ದಿನವನ್ನು ಮಾತ್ರ ಕಳೆಯುತ್ತಿದ್ದಾರೆ. ಎಲ್ಲರಿಗೂ ಮಾತನಾಡಿಸುವ ಸಮಯವು ಇಲ್ಲ. ಶಿಕ್ಷಣದ ಸಲುವಾಗಿ ಪೋಷಕರು ಮಕ್ಕಳನ್ನು ಹಾಸ್ಟೆಲ್‌ಗಳಿಗೆ ಸೇರಿಸುತ್ತಿದ್ದಾರೆ. ಅವರು ಬರುವುದು ಹಬ್ಬ ಹರಿದಿನಗಳಿಗೆ ಅಥವಾ ರಜಾ ದಿನಗಳಿಗೆ ಮಾತ್ರ. ಇಂದು ಗ್ರಾಮೀಣ ಕ್ರೀಡೆಗಳು ಆಡಲು ಸಹ ಯಾರಿಗೂ ಸಮಯವಿಲ್ಲ. ಆದರೆ ಹಿಂದೆ ಕಳೆದ ಸಮಯ ಏಷ್ಟು ನೆನಪಿಸಿಕೊಂಡರೂ ಮರಳಿ ಬರುವುದಿಲ್ಲ. ಆದ್ದರಿಂದ ಇಂದು ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಆಟ ಆಡಲು ಮತ್ತು ಹೊರಗಿನ ವಾತಾವರಣದ ಆನಂದ ಸವಿಯಲು ಸಮಯ ನೀಡಬೇಕು. ಇದರ ಜೊತೆಗೆ ಶಿಕ್ಷಣದ ಒತ್ತಡ ಸ್ವಲ್ಪ ಕಡಿಮೆ ಮಾಡಬೇಕು. ಅವರಷ್ಟಕ್ಕೆ ಅವರನ್ನು ಸಮಯ ಕಳೆಯಲು ಬಿಡಬೇಕು. ಸಮಯ ಸಿಕ್ಕಾಗ ತಮ್ಮ ತಮ್ಮ ಊರುಗಳಿಗೆ ಹೋಗಿ ಅಲ್ಲಿನ ಪರಿಸರ ಬಗ್ಗೆ ಪರಿಚಯಿಸಿ, ಆ ಊರಿನ ಬಗ್ಗೆ ಹೇಳಿ, ತಾವು ಕಳೆದ ಸಮಯದ ಬಗ್ಗೆ ತಿಳಿಸಬೇಕು.

Writer - ಸದ್ದಾಂಹುಸೇನ ಬಿ. ಬಳಗಾನೂರ

contributor

Editor - ಸದ್ದಾಂಹುಸೇನ ಬಿ. ಬಳಗಾನೂರ

contributor

Similar News