ಎರಡನೇ ಟೆಸ್ಟ್: ಇನಿಂಗ್ಸ್ ಸೋಲು ತಪ್ಪಿಸಲು ಬಾಂಗ್ಲಾ ಹೋರಾಟ

Update: 2019-11-23 17:51 GMT

ಕೋಲ್ಕತಾ, ನ.23: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡ ಮತ್ತೆ ಕುಸಿತಕ್ಕೊಳಗಾಗಿದ್ದು, ಇನಿಂಗ್ಸ್ ಸೋಲು ತಪ್ಪಿಸಲು ಹೋರಾಟ ನಡೆಸುತ್ತಿದೆ.

ಅಹರ್ನಿಶಿ ಟೆಸ್ಟ್‌ನ ಎರಡನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ ತಂಡ 32.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 90 ರನ್ ಗಳಿಸಬೇಕಾಗಿದೆ.

ಅರ್ಧಶತಕ ದಾಖಲಿಸಿರುವ ಮುಶ್ಫೀಕುರ್ರಹೀಂ (59) ಬ್ಯಾಟಿಂಗ್‌ನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಇಶಾಂತ್ ಶರ್ಮಾ(39ಕ್ಕೆ 4), ಉಮೇಶ ಯಾದವ್(40ಕ್ಕೆ 2) ದಾಳಿಗೆ ಸಿಲುಕಿದ ಬಾಂಗ್ಲಾದೇಶ ತಂಡ ಒಂದು ಹಂತದಲ್ಲಿ 6.4 ಓವರ್‌ಗಳಲ್ಲಿ 13ಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಶಾದ್ಮನ್ ಇಸ್ಲಾಂ(0), ನಾಯಕ ಮೊಮಿನುಲ್ ಹಕ್(0) ,ಇಮ್ರುಲ್ ಕೈಸ್(5), ಮತ್ತು ವಿಕೆಟ್ ಕೀಪರ್‌ ಮುಹಮ್ಮದ್ ಮಿಥುನ್(6) ಔಟಾಗುವುದರೊಂದಿಗೆ ತಂಡ ಮತ್ತೆ ಸಂಕಷ್ಟಕ್ಕೆ ಒಳಗಾಗಿತ್ತು. ಬಳಿಕ ಮುಶ್ಫೀಕುರ್ರಹೀಂ ಮತ್ತು ಮಹ್ಮುದುಲ್ಲಾ ತಂಡಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ ಹೋರಾಟ ಕೈಗೊಂಡರು. ಆದರೆ ಸ್ಪೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದ ಮಹ್ಮುದುಲ್ಲಾ 39 ರನ್(41ಎ, 7ಬೌ) ಗಳಿಸಿದ್ದಾಗ ಗಾಯಗೊಂಡರು. ಬ್ಯಾಟಿಂಗ್ ಮುಂದುವರಸಲಾರದೆ ಕ್ರೀಸ್ ತೊರೆದರು.

ಮೆಹಿದಿ ಹುಸೈನ್(15) ಮತ್ತು ತೈಜುಲ್ ಇಸ್ಲಾಂ(11) ಎರಡಂಕೆಯ ಸ್ಕೋರ್ ನೀಡಿ ನಿರ್ಗಮಿಸಿದರು. ತೈಜುಲ್ ಇಸ್ಲಾಂ ಔಟಾದ ಬೆನ್ನಲ್ಲೇ ಎರಡನೇ ದಿನದ ಆಟವನ್ನು ನಿಲ್ಲಿಸಲಾಯಿತು. ಮುಶ್ಫೀಕುರ್ರಹೀಂ 59 ರನ್(70ಎ, 10ಬೌ) ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಭಾರತ 347/9 ಡಿಕ್ಲೇರ್

ಮೊದಲ ದಿನದಾಟದಂತ್ಯಕ್ಕೆ 46 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 173 ರನ್ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಭಾರತ ಮತ್ತೆ ಬಾಂಗ್ಲಾ ವಿರುದ್ಧ ದೊಡ್ಡ ಗೆಲುವು ದಾಖಲಿಸುವ ಉದ್ದೇಶದೊಂದಿಗೆ 89.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 347 ರನ್ ಗಳಿಸಿ ಬಾಂಗ್ಲಾಕ್ಕೆ ಎರಡನೇ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿತು.

ಮೊದಲ ದಿನದಾಟದಂತ್ಯಕ್ಕೆ 59 ರನ್ ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತು 23 ರನ್ ಗಳಿಸಿದ್ದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮುಂದುವರಿಸಿ ತಂಡದ ಸ್ಕೋರ್‌ನ್ನು 236ಕ್ಕೆ ತಲುಪಿಸಿದರು.

ಮೊದಲು ನಾಯಕ ಕೊಹ್ಲಿ ಶತಕ ದಾಖಲಿಸಿದರು.ರಹಾನೆ ಅರ್ಧಶತಕ ದಾಖಲಿಸಿದರು. ರಹಾನೆ ಅರ್ಧಶತಕ ದಾಖಲಿಸಿದ ಬೆನ್ನಲ್ಲೇ ಅವರಿಗೆ ತೈಜುಲ್ ಇಸ್ಲಾಂ ಪೆವಿಲಿಯನ್ ಹಾದಿ ತೋರಿಸಿದರು. ಆ ಮೂಲಕ ಎರಡನೇ ದಿನದಾಟದಲ್ಲಿ ಬಾಂಗ್ಲಾಕ್ಕೆ ಮೊದಲ ಯಶಸ್ಸು ಸಿಕ್ಕಿತು. ರಹಾನೆ 51 ರನ್(69ಎ, 7ಬೌ) ಗಳಿಸಿದರು.

ಆಲ್‌ರೌಂಡರ್ ರವೀಂದ್ರ ಜಡೇಜ ಐದನೇ ವಿಕೆಟ್‌ಗೆ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಜಡೇಜ 12 ರನ್(41 ಎಸೆತ) ಗಳಿಸಿ ಅಬು ಝಾಹಿದ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ನಾಯಕ ವಿರಾಟ್ ಕೊಹ್ಲಿಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಜೊತೆಯಾದರು. ಆದರೆ ಇವರ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಕೊಹ್ಲಿ 136 ರನ್(194ಎ, 18ಬೌ) ಗಳಿಸಿದರು. 80.3ನೇ ಓವರ್‌ನಲ್ಲಿ ಕೊಹ್ಲಿ ಅವರು ಇಬಾದತ್ ಹುಸೈನ್ ಎಸೆತದಲ್ಲಿ ತೈಜುಲ್ ಇಸ್ಲಾಂಗೆ ಕ್ಯಾಚ್ ನೀಡಿದರು. ಆಗ ತಂಡದ ಮೊತ್ತ 308ಕ್ಕೆ ತಲುಪಿತ್ತು. ಕೊಹ್ಲಿ ನಿರ್ಗಮದ ಬಳಿಕ ಕ್ರೀಸ್‌ಗೆ ಆಗಮಿಸಿದ ಆರ್.ಅಶ್ವಿನ್ 21 ಎಸೆತಗಳಲ್ಲಿ 2 ಬೌಂಡರಿಗಳನ್ನು ಒಳಗೊಂಡ 9 ರನ್ ಸೇರಿಸಿದರು. ಅವರನ್ನು ಅಲ್ ಅಮೀನ್ ಹುಸೈನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಉಮೇಶ್ ಯಾದವ್(0) ಮತ್ತು ಇಶಾಂತ್ ಶರ್ಮಾ(0) ಅವರಿಗೆ ಖಾತೆ ತೆರೆಯಲು ಅಬು ಝಾಹಿದ್ ಮತ್ತು ಅಲ್ ಅಮೀನ್ ಅವಕಾಶ ನೀಡಲಿಲ್ಲ.

ಅಂತಿಮ ವಿಕೆಟ್‌ಗೆ ಸಹಾ ಮತ್ತು ಮುಹಮ್ಮದ್ ಶಮಿ ಮುರಿದ ಜೊತೆಯಾಟದಲ್ಲಿ 17 ರನ್‌ಗಳ ಜೊತೆಯಾಟ ನೀಡಿದರು. ಭಾರತ ಆಲೌಟಾಗುವ ಮೊದಲೇ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಸಹಾ ಔಟಾಗದೆ 17 ರನ್(41ಎ, 2ಬೌ) ಮತ್ತು ಶಮಿ ಔಟಾಗದೆ 10 ರನ್(5ಎ, 1ಬೌ,1ಸಿ) ಗಳಿಸಿದರು.

ಬಾಂಗ್ಲಾದೇಶ ತಂಡದ ಅಲ್ ಅಮೀನ್ ಹುಸೈನ್ 85ಕ್ಕೆ 3, ಅಬು ಝಾಹಿದ್ 77ಕ್ಕೆ 2, ಇಬಾದತ್ ಹುಸೈನ್ 91ಕ್ಕೆ 3 ಮತ್ತು ತೈಜುಲ್ ಇಸ್ಲಾಂ 80ಕ್ಕೆ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News