ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಎಚ್ಚರ ಇರಲಿ: ಎನ್‌ಸಿಪಿ ಶಾಸಕರಿಗೆ ಶರದ್ ಪವಾರ್

Update: 2019-11-23 15:49 GMT

ಮುಂಬೈ, ನ. 23: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆಗೆ ಕೈಜೋಡಿಸಿದ ತನ್ನ ಅಳಿಯ ಅಜಿತ್ ಪವಾರ್ ಅವರ ನಿರ್ಧಾರವನ್ನು ಎನ್‌ಸಿಪಿ ಬೆಂಬಲಿಸದು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಅಲ್ಲದೆ, ಬಂಡಾಯ ನಾಯಕ ಅಜಿತ್ ಪವಾರ್‌ಗೆ ಬೆಂಬಲ ನೀಡುವುದರ ವಿರುದ್ಧ ತನ್ನ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಮುಂಬೈ ರಾಜಭವನದಲ್ಲಿ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಎನ್‌ಸಿಸಿ ಶಿವಸೇನೆ ಹಾಗೂ ಕಾಂಗ್ರೆಸ್ ನಡುವೆ ಮಾತುಕತೆ ನಡೆಯುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ.

 ಈ ಹಿನ್ನೆಲೆಯಲ್ಲಿ ಶಿವಸೇನೆಯೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶರದ್ ಪವಾರ್, ಎನ್‌ಸಿಪಿ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ನೆನಪಿಸಿದರು. ಅಲ್ಲದೆ, ಅಜಿತ್ ಪವಾರ್ ಅವರನ್ನು ಬೆಂಬಲಿಸಿದವರು ಪಕ್ಷದ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು. 10ರಿಂದ 11 ಶಾಸಕರು ಅಜಿತ್ ಪವಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವುದು ತನಗೆ ತಿಳಿದಿದೆ ಎಂದು ಅವರು ಹೇಳಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಮ್ಮನ್ನು ರಾಜ್‌ಭವನಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕರು ತಿಳಿಸಿದರು.

  ಎನ್‌ಸಿಪಿಯ ಕಾರ್ಯಾಕಾರಿಣಿಯ ನಾಯಕನ ಸ್ಥಾನಕ್ಕೆ ಅಜಿತ್ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಶರದ್ ಪವಾರ್ ಅವರ ಬಳಿಕ ಮಾತನಾಡಿದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಇಂದಿನ ಬೆಳವಣಿಗೆ ಮಹಾರಾಷ್ಟ್ರದ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News