ನಾವು ಶರದ್ ಪವಾರ್ ಜೊತೆ: ಅಜಿತ್ ಪವಾರ್ ಜೊತೆಗಿದ್ದ 9 ಶಾಸಕರು

Update: 2019-11-23 16:24 GMT
ಶರದ್ ಪವಾರ್

ಮುಂಬೈ, ನ.23: ಶನಿವಾರ ಬೆಳಿಗ್ಗೆ ಇಲ್ಲಿಯ ರಾಜಭವನದಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದ ಕನಿಷ್ಠ ಒಂಭತ್ತು ಎನ್‌ಸಿಪಿ ನಾಯಕರು ಸಂಜೆ ಪಕ್ಷದ ಮಡಿಲಿಗೆ ಮರಳಿದ್ದು,ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನಿಷ್ಠೆಯನ್ನು ಘೋಷಿಸಿದ್ದಾರೆ.

ಇಲ್ಲಿಯ ವೈ.ಬಿ.ಚವಾಣ್ ಸೆಂಟರ್‌ನಲ್ಲಿ ಶರದ್ ಪವಾರ್ ಕರೆದಿದ್ದ ಶಾಸಕರ ಸಭೆಯಲ್ಲಿ ಸಂಜೆ ಎನ್‌ಸಿಪಿ ನಾಯಕ ಶಶಿಕಾಂತ ಶಿಂಧೆ ಹಾಗೂ ಶಿವಸೇನೆ ನಾಯಕರಾದ ಏಕನಾಥ ಶಿಂಧೆ ಮತ್ತು ಮಿಲಿಂದ ನಾರ್ವೇಕರ್ ಅವರೊಂದಿಗೆ ಪ್ರತ್ಯಕ್ಷರಾದ ಉದ್ಗೀರ್ ಶಾಸಕ ಸಂಜಯ ಬನ್ಸೋಡೆ ಅವರು,ತಾನೆಲ್ಲಿಗೂ ಹೋಗಿರಲಿಲ್ಲ,ತಾನು ಶರದ್ ಪವಾರ್ ಅವರ ಜೊತೆಯಲ್ಲಿಯೇ ಇದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಮಾಣ ವಚನದ ಬಗ್ಗೆ ತಮಗೆ ಮಾಹಿತಿ ನೀಡಲಾಗಿರಲಿಲ್ಲ ಎಂದು ಬೆಳಿಗ್ಗೆ ರಾಜಭವನದಲ್ಲಿ ಅಜಿತ ಜೊತೆಯಲ್ಲಿದ್ದ ನಾಸಿಕ್ ಶಾಸಕರಾದ ದಿಲೀಪ್ ಬನಕರ್ ಮತ್ತು ಮಾಣಿಕರಾವ ಕೋಕಟೆ ಅವರು ನಂತರ ಪ್ರತ್ಯೇಕವಾಗಿ ಟ್ವೀಟಿಸಿ, ತಾವು ಎನ್‌ಸಿಪಿಯಲ್ಲಿಯೇ ಇದ್ದೇವೆ ಎಂದು ಹೇಳಿದ್ದಾರೆ. ಅವರು ಪಕ್ಷದ ಮುಖ್ಯಸ್ಥರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದ ಎನ್‌ಸಿಪಿ ಶಾಸಕರಾದ ರಾಜೇಂದ್ರ ಶಿಂಗ್ನೆ, ಸಂದೀಪ ಕ್ಷೀರಸಾಗರ,ಸುನಿಲ ಶೆಳ್ಕೆ, ಸುನಿಲ ಭುಸರಾ, ನರಹರಿ ಝಿರ್ವಾಲ್ ಮತ್ತು ಸುನಿಲ ಟಿಂಗ್ರೆ ಅವರೂ ಪಕ್ಷದ ಮಡಿಲಿಗೆ ಮರಳಿದ್ದಾರೆ. ಸಮಾರಂಭದಲ್ಲಿ ಉಪಸ್ಥಿತರಿದ್ದರೆನ್ನಲಾದ ಇನ್ನೋರ್ವ ಶಾಸಕ ಧನಂಜಯ ಮುಂಢೆ ಅವರೂ ಸಂಜೆ ಎನ್‌ಸಿಪಿ ಸಭೆಯಲ್ಲಿದ್ದರಾದರೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ.

ತಾವು ಪಕ್ಷದ ನಿಲುವಿಗೆ ವಿರುದ್ಧವಾಗಿಲ್ಲ. ತಾವು ಪಕ್ಷದೊಂದಿಗೇ ಇದ್ದೇವೆ. ಅಜಿತ್ ಪವಾರ್ ಸೂಚನೆಯಂತೆ ತಾವು ರಾಜಭವನಕ್ಕೆ ತೆರಳಿದ್ದೆವು. ಅವರು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ಅವರ ಆದೇಶವನ್ನು ತಾವು ಪಾಲಿಸಿದ್ದೆವು. ರಾಜಭವನದಲ್ಲಿ ಏನು ನಡೆಯಲಿದೆ ಎನ್ನುವುದು ತಮಗೆ ತಿಳಿದಿರಲಿಲ್ಲ ಎಂದು ಈ ಶಾಸಕರು ಹೇಳಿದ್ದಾರೆ.

ಪವಾರ್ ಬಳಿ ಪಕ್ಷದ ಆಂತರಿಕ ಬಳಕೆಗಾಗಿ ಸಿದ್ಧಪಡಿಸಿದ್ದ ಎಲ್ಲ 54 ಶಾಸಕರ ಹೆಸರು ಮತ್ತು ಸಹಿಗಳಿದ್ದ ಪಟ್ಟಿಯಿತ್ತು. ಅವರು ಅದನ್ನೇ ಬೆಂಬಲಪತ್ರವಾಗಿ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ ಎಂದು ತಾನು ಭಾವಿಸಿದ್ದೇನೆ. ಇದು ನಿಜವಾದರೆ ರಾಜ್ಯಪಾಲರನ್ನು ದಾರಿ ತಪ್ಪಿಸಲಾಗಿದೆ ಎಂದು ತಿಳಿಸಿದ ಶರದ್ ಪವಾರ್, ಪಕ್ಷನಿಷ್ಠೆಯನ್ನು ಬದಲಿಸಿದವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಉಪಚುನಾವಣೆಗಳಲ್ಲಿ ಅವರ ಸೋಲನ್ನು ನಾವು ಖಚಿತಪಡಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News