ಮಿಝೊರಾಂ ಶಾಸಕರ ವೇತನ ಮತ್ತು ಭತ್ಯೆಗಳಲ್ಲಿ ಶೇ.130.77 ಏರಿಕೆಗೆ ಮಸೂದೆ ಅಂಗೀಕಾರ
Update: 2019-11-23 22:22 IST
ಹೊಸದಿಲ್ಲಿ, ನ.23: ಶಾಸಕರ ಮಾಸಿಕ ವೇತನ ಮತ್ತು ಭತ್ಯೆಗಳನ್ನು ಶೇ.133.77ರಷ್ಟು ಹೆಚ್ಚಿಸುವ ಮಸೂದೆಯನ್ನು ಮಿಝೊರಾಂ ವಿಧಾನಸಭೆಯು ಅಂಗೀಕರಿಸಿದೆ.
ನ.21ರಂದು ಮಸೂದೆಯು ಅಂಗೀಕಾರಗೊಂಡಿದ್ದು,ಶಾಸಕರ ಮಾಸಿಕ ವೇತನ ಮತ್ತು ಭತ್ಯೆಗಳು ಈಗಿನ 65,000ರೂ.ಗಳಿಂದ 1,50,000 ರೂ.ಗಳಿಗೆ ಏರಲಿದೆ. ಮುಖ್ಯಮಂತ್ರಿಗಳು ಮಾಸಿಕ 1.80 ಲ.ರೂ.ವೇತನ ಮತ್ತು ವಿಧಾನಸಭಾ ಸ್ಪೀಕರ್ ಮಾಸಿಕ 1.73 ಲ.ರೂ.ವೇತನ ಮತ್ತು ಭತ್ಯೆಗಳನ್ನು ಪಡೆಯಲಿದ್ದಾರೆ. ಸಂಪುಟ ದರ್ಜೆ ಸಚಿವರು ಮತ್ತು ಪ್ರತಿಪಕ್ಷ ನಾಯಕರು ಮಾಸಿಕ 1.68 ಲ.ರೂ.ವೇತನ ಮತ್ತು ಭತ್ಯೆಗಳನ್ನು ಪಡೆಯಲಿದ್ದಾರೆ.
ಪಕ್ಷಗಳ ಮುಖ್ಯ ಸಚೇತಕರು ಮತ್ತು ಉಪ ಮುಖ್ಯ ಸಚೇತಕರ ವೇತನಗಳಲ್ಲಿಯೂ ಏರಿಕೆಯಾಗಿದ್ದು,ಉಪ ಸ್ಪೀಕರ್ ಮಾಸಿಕ 1.61 ಲ.ರೂ.ಪಡೆಯಲಿದ್ದಾರೆ. ನೂತನ ಮಸೂದೆಯಡಿ ಶಾಸಕರ ಪಿಂಚಣಿಯನ್ನೂ ಹೆಚ್ಚಿಸಲಾಗಿದೆ.