‘ಉಗ್ರರು’ ಎಂದು ನಿಂದಿಸಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಹಲ್ಲೆ: ಆರೋಪ

Update: 2019-11-23 17:36 GMT

 ಜೈಪುರ, ನ. 23: ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದ ಸಂದರ್ಭ ಬಿಹಾರಿ ವಿದ್ಯಾರ್ಥಿಗಳು ಕಾಶ್ಮೀರಿ ವಿದ್ಯಾರ್ಥಿಗಳನ್ನು ‘ಭಯೋತ್ಪಾದಕರು’ ಎಂದು ಕರೆದು ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಚಿತ್ತೋರ್‌ಗಢದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸಂಭವಿಸಿದೆ.

 ಬಿಹಾರಿ ವಿದ್ಯಾರ್ಥಿಗಳ ಹಲ್ಲೆಯಿಂದ ಕಾಶ್ಮೀರದ ಹಂಡ್ವಾರದ ವಿದ್ಯಾರ್ಥಿ ತಾಹಿರ್ ಮಜೀದ್ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಿಲಾಲ್ ಅಹ್ಮದ್, ಇಸ್ಫಾಕ್ ಅಹ್ಮದ್ ಖುರೇಶಿ ಹಾಗೂ ಮುಹಮ್ಮದ್ ಅಲಿ ಗಾಯಗೊಂಡ ಇತರರು.

 ಗೇಟ್ ಪಾಸ್ ಅನ್ನು ಕಾಶ್ಮೀರಿ ವಿದ್ಯಾರ್ಥಿಗಳಿಗೆ ನೀಡಿ, ಬಿಹಾರದ ವಿದ್ಯಾರ್ಥಿಗಳಿಗೆ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಕಾಶ್ಮೀರಿ ಹಾಗೂ ಬಿಹಾರ್ ವಿದ್ಯಾರ್ಥಿಗಳು ನಡುವೆ ಘರ್ಷಣೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

‘‘ತಮಗೆ ಗೇಟ್ ಪಾಸ್ ನಿರಾಕರಿಸಿರುವುದಕ್ಕೆ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ ಸಂದರ್ಭ ಬಿಹಾರಿ ವಿದ್ಯಾರ್ಥಿಗಳು ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿಂದಿಸಿದ್ದರು. ಇದು ಕಾಶ್ಮೀರಿ ವಿದ್ಯಾರ್ಥಿಗಳಿಗೆ ತಿಳಿದ ಬಳಿಕ ಬಿಹಾರಿ ಹಾಗೂ ಕಾಶ್ಮೀರಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು’’ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ‘‘ಬಿಹಾರದ ವಿದ್ಯಾರ್ಥಿಗಳು ಒರಟಾಗಿ ವರ್ತಿಸಿದರು ಹಾಗೂ ಅವರು ನಮ್ಮನ್ನು ಭಯೋತ್ಪಾದಕರು ಎಂದು ಕರೆದರು’’ ಎಂದು ಥಳಿತಕ್ಕೊಳಗಾದ ಕಾಶ್ಮೀರಿ ವಿದ್ಯಾರ್ಥಿಗಳಲ್ಲಿ ಓರ್ವನಾದ ಬಿಲಾಲ್ ಅಹ್ಮದ್ ಹೇಳಿದ್ದಾನೆ.

 ವಿದ್ಯಾರ್ಥಿಗಳ ಈ ಘರ್ಷಣೆಯನ್ನು ವಿಶ್ವವಿದ್ಯಾನಿಲಯದ ಡೀನ್ ಪರಿಹರಿಸಿದ್ದರು. ಆದರೆ, ರಾತ್ರಿ, ಉಪಹಾರ ಗೃಹದಲ್ಲಿ ಬಿಹಾರಿ ವಿದ್ಯಾರ್ಥಿಗಳು ಸೇರಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು.

    ಬಿಹಾರ್ ವಿದ್ಯಾರ್ಥಿಗಳು ಪೂರ್ವ ಯೋಜಿತವಾಗಿ ಹಲ್ಲೆ ನಡೆಸಿದ್ದಾರೆ. ಅವರು ಕಬ್ಬಿಣದ ರಾಡ್‌ನೊಂದಿಗೆ ಬಂದಿದ್ದರು. ನಾವಿದ್ದ ಕೊಠಡಿಯ ಗ್ರಿಲ್ ಮೂಲಕ ಕಲ್ಲುಗಳನ್ನು ಎಸೆದಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ.

ಈ ಬಗ್ಗೆ ಕಾಶ್ಮೀರಿ ವಿದ್ಯಾರ್ಥಿಗಳು ಎಸ್‌ಎಚ್‌ಒಗೆ ಅರ್ಜಿ ಬರೆದಿದ್ದರು. ಆದರೆ, ಅವರು ಸ್ವೀಕರಿಸಿರಲಿಲ್ಲ. ಆದರೆ, ಘಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಪಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು.

ಅದೇ ದಿನ ರಾತ್ರಿ ವಿಶ್ವವಿದ್ಯಾನಿಲಯದ ಆಡಳಿತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಸಮೀಪದ ಹಾಸ್ಟೆಲ್‌ಗೆ ಸ್ಥಳಾಂತರಿಸಿತ್ತು. ವಿಶೇಷ ಪೊಲೀಸ್ ಅಧೀಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಅಲ್ಲದೆ ಅವರಿಗೆ ರಕ್ಷಣೆಯ ಭರವಸೆ ನೀಡಿದ್ದಾರೆ.

ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಇದುವರೆಗೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಚಿತ್ತೋರ್‌ಗಢದಲ್ಲಿರುವ ಗಂಗ್ರಾರಂ ಪೊಲೀಸ್ ಠಾಣೆಯ ಎಸ್‌ಎಚ್‌ಒ ಲಾಬು ರಾಮ್ ತಿಳಿಸಿದ್ದಾರೆ.

************///

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News