ಆಂಧ್ರ:ಸಂಪೂರ್ಣ ಪಾನ ನಿಷೇಧದತ್ತ ಪ್ರಥಮ ಹೆಜ್ಜೆ

Update: 2019-11-23 17:50 GMT

 ಅಮರಾವತಿ, ನ.23: ಆಂಧ್ರಪ್ರದೇಶ ಸರಕಾರ ರಾಜ್ಯದ ಎಲ್ಲಾ ಬಾರ್‌ಗಳ ಲೈಸೆನ್ಸನ್ನು ರದ್ದುಗೊಳಿಸಲು ನಿರ್ಧರಿಸಿದ್ದು ಲೈಸೆನ್ಸ್ ರದ್ದು ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಅಬಕಾರಿ ಆಯುಕ್ತರಿಗೆ ಸರಕಾರ ಸೂಚಿಸಿದೆ.

 ಹೊಸ ವರ್ಷದಿಂದ ನೂತನ ಬಾರ್‌ಗಳಿಗೆ ಲೈಸೆನ್ಸ್ ನೀಡಲಾಗುವುದು, ಆದರೆ ಬಾರ್‌ಗಳ ಪ್ರಮಾಣವನ್ನು 40% ಕಡಿಮೆಗೊಳಿಸಲಾಗುವುದು.

     ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೊಳಿಸುವುದಾಗಿ ವಿಧಾನಸಭೆ ಚುನಾವಣೆಯ ಸಂದರ್ಭ ಜಗನ್‌ಮೋಹನ್ ರೆಡ್ಡಿ ಆಶ್ವಾಸನೆ ನೀಡಿದ್ದರು. ಇದರಂತೆ ಪ್ರಥಮ ಹಂತದಲ್ಲಿ , ಈಗಿರುವ ಎಲ್ಲಾ ಬಾರ್‌ಗಳ ಲೈಸೆನ್ಸನ್ನು ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ. ತಮ್ಮ ವ್ಯವಹಾರವನ್ನು 2019ರ ಡಿಸೆಂಬರ್ 31ರೊಳಗೆ ಮುಕ್ತಾಯಗೊಳಿಸುವಂತೆ ಬಾರ್ ಮಾಲಕರಿಗೆ ಸೂಚಿಸಲಾಗಿದೆ. ಸ್ಟಾರ್ ಹೋಟೆಲ್‌ಗಳಿಗೆ ಹಾಗೂ ಸಣ್ಣ ಪ್ರಮಾಣದ ಮದ್ಯತಯಾರಿಕಾ ಘಟಕಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು ಅವು ತಮ್ಮ ವ್ಯವಹಾರ ಮುಂದವರಿಸಬಹುದು ಎಂದು ಸರಕಾರದ ಆದೇಶ ತಿಳಿಸಿದೆ.

   ಈಗಿರುವ 798 ಬಾರ್‌ಗಳಲ್ಲಿ ಕೇವಲ 401ಕ್ಕೆ ಲೈಸೆನ್ಸ್ ನೀಡಲಾಗುತ್ತದೆ. ಈಗ ಇರುವ ಬಾರ್‌ಗಳ ಲೈಸೆನ್ಸ್‌ನ ಅವಧಿ 2022ರವರೆಗೆ ಇರುವುದರಿಂದ ಪ್ರಮಾಣಕ್ಕೆ ಅನುಗುಣವಾಗಿ ಲೈಸೆನ್ಸ್ ಶುಲ್ಕ ಮರು ಪಾವತಿಸಲು ಸರಕಾರ ನಿರ್ಧರಿಸಿದೆ. 2020ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು ಹೊಸ ಲೈಸೆನ್ಸನ್ನು 2 ವರ್ಷದ ಅವಧಿಗೆ ನೀಡಲಾಗುತ್ತದೆ. ಆಯಾ ಪಟ್ಟಣದಲ್ಲಿ ಎಷ್ಟು ಬಾರ್‌ಗಳಿಗೆ ಲೈಸೆನ್ಸ್ ನೀಡಬಹುದು ಎಂಬ ಬಗ್ಗೆ ಅಬಕಾರಿ ಆಯುಕ್ತರು ಮಾಹಿತಿ ನೀಡಬೇಕಾಗಿದೆ.

  ಚಿಲ್ಲರೆ ಮದ್ಯಮಾರಾಟ ವ್ಯವಸ್ಥೆಯನ್ನು ಸರಕಾರ ಈಗಾಗಲೇ ನಿಯಂತ್ರಣಕ್ಕೆ ಪಡೆದಿದ್ದು ಚಿಲ್ಲರೆ ಮಾರಾಟ ಮಳಿಗೆಗಳ ಸಂಖ್ಯೆಯನ್ನು 4,380ರಿಂದ 3,500ಕ್ಕೆ ಇಳಿಸಿದೆ. ಚಿಲ್ಲರೆ ಮಾರಾಟ ಅಂಗಡಿಗಳು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆದಿರಬೇಕೆಂದು ಸರಕಾರ ಆದೇಶಿಸಿದೆ.

  ಏಕಾಏಕಿ ಲೈಸೆನ್ಸ್‌ಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಲೈಸೆನ್ಸ್‌ನ ಅವಧಿ ಮುಗಿಯುವವರೆಗಾದರೂ ಕಾರ್ಯ ನಿರ್ವಹಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ವೈನ್ ಮಾರಾಟಗಾರರ ಸಂಘದ ಅಧ್ಯಕ್ಷ ರಾಯಲ ಸುಬ್ಬಾರಾವ್ ಒತ್ತಾಯಿಸಿದ್ದಾರೆ. ಈ ಮಧ್ಯೆ, ಸರಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಬಾರ್ ಮಾಲಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News