ಮೂರನೇ ಮಹಡಿಯಿಂದ ಎಸೆದರೂ ಬದುಕಿ ಉಳಿದ ಬಾಲಕ ಈಗ ಪರ್ಫೆಕ್ಟ್!
ವಾಷಿಂಗ್ಟನ್, ನ.24: ಅಮೆರಿಕದ ಮಿನ್ನೆಸೊಟಾ ಮಾಲ್‌ನ ಮೂರನೇ ಮಹಡಿಯಿಂದ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಐದು ವರ್ಷದ ಬಾಲಕ ಇದೀಗ ಆರೋಗ್ಯವಂತನಾಗಿ ಶಾಲೆಗೆ ಹೋಗುತ್ತಿದ್ದಾನೆ!
ಕಳೆದ ಎಪ್ರಿಲ್‌ನಲ್ಲಿ ನಡೆದ ಈ ಘಟನೆಯಿಂದಾಗಿ ಬಾಲಕ ಲಂಡೇನ್‌ನ ಎರಡೂ ಕೈ ಹಾಗೂ ಒಂದು ಕಾಲು ಮುರಿದಿತ್ತು. ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿತ್ತು. ಇದೀಗ ಪರಿಪೂರ್ಣವಾಗಿ ಚೇತರಿಸಿಕೊಂಡಿರುವ ಬಾಲಕ ಮಾಮೂಲಿನಂತೆ ಶಾಲೆಗೆ ಹೋಗುತ್ತಿದ್ದಾನೆ ಎಂದು ಈತನ ಚಿಕಿತ್ಸೆಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದ್ದ ’ಗೋಫಂಡ್‌ಮಿ’ ಪೇಜ್‌ನ ಸಂಘಟಕ ನೋಹ್ ಹನ್‌ಮನ್ ಹೇಳುತ್ತಾರೆ.
ಘಟನೆ ಬಳಿಕ ತೀವ್ರ ನಿಗಾ ಘಟಕದಲ್ಲಿ ಹಲವು ತಿಂಗಳುಗಳನ್ನು ಕಳೆದ ಬಾಲಕ ಈ ಅವಧಿಯಲ್ಲಿ ಮುರಿದ ಕಾಲಿಗೆ ಚಿಕಿತ್ಸೆ ಪಡೆದಿದ್ದು, ಆತನ ಗುಲ್ಮ ಹೊರತೆಗೆಯಲಾಗಿದೆ. ಶ್ವಾಸಕೋಶ ಹಾಗೂ ಹೊಟ್ಟೆಯಲ್ಲಿ ತುಂಬಿದ್ದ ಕೀವು ಯಶಸ್ವಿಯಾಗಿ ಹೊರತೆಗೆದು ಇತರ ಗಾಯಗಳನ್ನು ಗುಣಪಡಿಸಲಾಗಿದೆ ಎಂದು ಕುಟುಂಬ ಪ್ರಕಟಿಸಿದೆ.
ಇದೀಗ ಕೃತಕ ಕಾಲಿನ ಸಹಾಯ ಇಲ್ಲದೇ ಆತ ನಡೆದಾಡುತ್ತಿದ್ದು, ಬೇರೆ ಮಕ್ಕಳಂತೆ ಸಹಜವಾಗಿ ಶಾಲೆಗೆ ಹೋಗುತ್ತಿದ್ದಾನೆ ಎಂದು ಗೋಫಂಡ್‌ಮಿ ಪೇಜ್ ಹೇಳಿದೆ. ಕಳೆದ ಎಪ್ರಿಲ್ 12ರಂದು ಬಾಲಕ ಮಾಲ್‌ನಲ್ಲಿದ್ದಾಗ ಎಮ್ಯಾನ್ಯುಯೆಲ್ ಅರಾಂಡ ಎಂಬ ವ್ಯಕ್ತಿ ಪುಟ್ಟ ಮಗುವನ್ನು ಮೂರನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದ. ಈತನ ಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಸಲುವಾಗಿ ಆರಂಭವಾದ ಗೋಫಂಡ್‌ಮಿ ಪೇಜ್ ಇದುವರೆಗೆ 10 ಲಕ್ಷ ಡಾಲರ್ ನೆರವು ಸಂಗ್ರಹಿಸಿದೆ.