'ದೇಶದ ಜಾತ್ಯಾತೀತ ವಿನ್ಯಾಸ ಬದಲಿಸುತ್ತಿರುವ ಕೇಂದ್ರ ಸರಕಾರ'

Update: 2019-11-24 17:26 GMT

ಪುರಿ, ನ. 24: ಭಾರತದ ಗಂಭೀರ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಬಿಕ್ಕಟ್ಟು ಎದುರಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಹಾಗೂ ಅದರ ಸಹ ಸಂಘಟನೆಗಳು ದೇಶದ ಜಾತ್ಯತೀತ ವಿನ್ಯಾಸ ಬದಲಾಯಿಸಲು ಬಯಸುತ್ತಿವೆ ಎಂದು ಭಾರತದ ಸಾಮಾಜಿಕ ಹಾಗೂ ನಾಗರಿಕ ಹಕ್ಕು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪುರಿಯಲ್ಲಿ ಶನಿವಾರ ಆರಂಭವಾದ ‘ನ್ಯಾಶನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್’ (ಎನ್‌ಎಪಿಎಂ)ನ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಅರುಣ್ ರಾಯ್, ಬೆಜವಾಡ ವಿಲ್ಸನ್, ತೀಸ್ತಾ ಸೆಟಲ್ವಾಡ್ ಹಾಗೂ ಮೇಧಾ ಪಾಟ್ಕರ್ ಸಹಿತ ಭಾರತದ ಪ್ರಮುಖ ಸಾಮಾಜಿಕ ಹಾಗೂ ನಾಗರಿಕ ಹಕ್ಕು ಹೋರಾಟಗಾರರು ಈ ಆತಂಕ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ವಿರುದ್ಧ, ಕೈಗಾರಿಕೆ ಹಾಗೂ ಸ್ಥಳಾಂತರದ ವಿರುದ್ಧ, ಅರಣ್ಯವಾಸಿಗಳ ಹಕ್ಕಿಗೆ ಆಗ್ರಹಿಸಿ, ರೈತರು, ಮೀನುಗಾರರು ಹಾಗೂ ದಿನಕೂಲಿ ಕಾರ್ಮಿಕರ ಪರವಾಗಿ ಹೋರಾಟ ನಡೆಸುತ್ತಿರುವ ವಿವಿಧ ತಳಮಟ್ಟದ ಸಂಘಟನೆಗಳ 600ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಕಾಲೀನ ಹೋರಾಟ, ಸವಾಲು; ನಿಸರ್ಗ ಸಂಪತ್ತಿನ ಮೇಲೆ ಕಾರ್ಪೋರೇಟ್ ದಾಳಿ, ಕೋಮು ರಾಜಕೀಯದ ವಿರುದ್ಧ ದೇಶಾದ್ಯಂತ ತಳಮಟ್ಟದಲ್ಲಿ ಚಳವಳಿ ನಡೆಸಲು ವ್ಯೂಹಾತ್ಮಕ ಕ್ರಿಯಾ ಯೋಜನೆಗಳನ್ನು ರೂಪಿಸುವ ಬಗ್ಗೆ ಪ್ರತಿನಿಧಿಗಳು ಚರ್ಚೆ ನಡೆಸಿದರು.

 ಮ್ಯಾಗ್ಸಸೆ ಪ್ರಶಸ್ತಿ ವಿಜೇತೆ ಅರುಣಾ ರಾಯ್ ಮಾತನಾಡಿ, ಕಾರ್ಮಿಕರು ಹಾಗೂ ರೈತರು ಭಾರತದ ಅಡಿಪಾಯ. ಆದರೆ, ಗಣಿಗಾರಿಕೆ, ಕೈಗಾರಿಕೆ, ವಿಮಾನ ನಿಲ್ದಾಣ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಅವರಿಂದ ಭೂಮಿ ಕಸಿದುಕೊಳ್ಳಲಾಗುತ್ತಿದೆ. ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿರುವ ವಿರುದ್ಧ ಸರಕಾರ ನೂತನ ಕಾನೂನು ತರಬೇಕು ಎಂದರು.

ನಾಗರಿಕ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಾತನಾಡಿ, ಕೇಂದ್ರ ಸರಕಾರ ರಾಷ್ಟ್ರೀಯ ಪೌರತ್ವ ನೋಂದಣಿ ಹೆಸರಲ್ಲಿ ಸಾಮಾನ್ಯ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಹಾಗೂ ಆದಿವಾಸಿ, ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲರನ್ನು ಗುರಿಯಾಗಿರಿಸುತ್ತಿದೆ. ಒಂದೆಡೆ ಜಲ, ಅರಣ್ಯ ಹಾಗೂ ಭೂಮಿ ಕಿತ್ತುಕೊಂಡು ಅದಾನಿಯನ್ನು ಶ್ರೀಮಂತರನ್ನಾಗಿಸುತ್ತಿದೆ. ಇನ್ನೊಂದೆಡೆ ರಾಷ್ಟ್ರೀಯ ಪೌರತ್ವ ನೋಂದಣಿ ಹೆಸರಲ್ಲಿ ಸಾಮಾನ್ಯ ಜನರಲ್ಲಿ ಆತಂಕ ಮೂಡಿಸುತ್ತಿದೆ ಎಂದರು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಮಾತನಾಡಿ, ಕೇಂದ್ರ ಸರಕಾರ ವಿಭಜಕ ನೀತಿ ಮೂಲಕ ಕೆಲವು ಶ್ರೀಮಂತರಿಗೆ ಲಾಭ ಉಂಟು ಮಾಡಿದೆ. ಅಲ್ಲದೆ, ಬಡ ಜನರನ್ನು ಇನ್ನಷ್ಟು ದುರ್ಬಲರನ್ನಾಗಿಸಿದೆ ಎಂದರು.

ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಮಾತನಾಡಿ, ಆರ್ಥಿಕ ನಿಧಾನಗತಿಯಿಂದ ರೈತರು, ಕಾರ್ಮಿಕರು ಹಾಗೂ ಮೀನುಗಾರರು ಬದುಕು ಕಟ್ಟಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇದೇ ಸಂದರ್ಭ ಕೋಮು ರಾಜಕೀಯದಿಂದ ದೇಶದ ಏಕತೆ ಗಂಡಾಂತರದಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News