ಟಿಪ್ಪು ಬಳಸಿದ್ದ ರಾಕೆಟ್ ತಂತ್ರಜ್ಞಾನವನ್ನು ಅಬ್ದುಲ್ ಕಲಾಂ ಪ್ರಶಂಸಿಸಿದ್ದರು: ಡಿಎಂಕೆ ನಾಯಕ ತಿರುಚಿ ಶಿವ
#"1970ರಲ್ಲಿ ಆರೆಸ್ಸೆಸ್ ಪ್ರಕಟಿಸಿದ್ದ ಪುಸ್ತಕದಲ್ಲಿ ಟಿಪ್ಪುವನ್ನು ಹೊಗಳಲಾಗಿತ್ತು"
ಚೆನ್ನೈ: ದ್ರಾವಿಡ ನಾಯಕ ಶುಭಾ ವೀರಪಾಂಡಿಯನ್ ನೇತೃತ್ವದಲ್ಲಿ ಚೆನ್ನೈ ನಗರದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ 270ನೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಎಂಕೆ ನಾಯಕರು, ಕಾರ್ಯದರ್ಶಿಗಳು, ಸಂಸದರು ತಿರುಚ್ಚಿ ಶಿವ ಮತ್ತು ಎ ರಾಜಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಿರುಚಿ ಶಿವ, "ಇತಿಹಾಸವನ್ನು ತಿರುಚುತ್ತಿರುವುದು ದೇಶವು ಇಂದು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಐತಿಹಾಸಿಕ ವ್ಯಕ್ತಿಗಳ ವ್ಯಕ್ತಿತ್ವವನ್ನು ಹಾಳುಗೆಡವಲಾಗುತ್ತಿದೆ. ಅಳಿಸಿ ಹಾಕಲಾಗುತ್ತಿದೆ. ಬಿಜೆಪಿ ಸರಕಾರವು ಇದನ್ನು ಮಾಡಬಾರದು" ಎಂದರು.
"ಇತಿಹಾಸ ಬರೆಯುವವರ ಆಧಾರದಲ್ಲಿ ವ್ಯಕ್ತಿಯೊಬ್ಬರ ನೈಜ ಮುಖವನ್ನು ಚಿತ್ರಿಸಲಾಗುತ್ತಿದೆ. ಬಿಜೆಪಿಗರು ಟಿಪ್ಪು ಬಗೆಗಿನ ಸತ್ಯಗಳನ್ನು ತಿರುಚುತ್ತಿದ್ದಾರೆ. 'ಮಿಲೆನಿಯಂ ಇಯರ್ ಬೈ ಇಯರ್' ಪುಸ್ತಕ ಟಿಪ್ಪುವನ್ನು ತಪ್ಪಾಗಿ ಚಿತ್ರಿಸಿದೆ. ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇವಸ್ಥಾನವಿದೆ. ಅಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಇಬ್ಬರ ಚಿತ್ರಗಳಿವೆ. ಇವರಿಬ್ಬರೂ ಹಿಂದೂಗಳಿಗೆ ಅನ್ಯಾಯ ಎಸಗಿದ್ದರೆ ದೇವಸ್ಥಾನದಲ್ಲಿ ಇವರ ಚಿತ್ರಗಳಿಗೆ ಜಾಗ ಸಿಗುತ್ತಿತ್ತೇ?" ಎಂದವರು ಪ್ರಶ್ನಿಸಿದರು.
"ಟಿಪ್ಪು ಸುಲ್ತಾನ್ ಬಳಸಿದ್ದ ರಾಕೆಟ್ ತಂತ್ರಜ್ಞಾನವನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಪ್ರಶಂಸಿಸಿದ್ದರು ಎಂದ ಅವರು, ಟಿಪ್ಪು ಸಂಗ್ರಹಿಸಿದ್ದ 2000 ಪುಸ್ತಕಗಳು ಆಕ್ಸ್ ಫರ್ಡ್ ವಿವಿಯಲ್ಲಿದೆ. ಬ್ರಿಟಿಷರ ವಿರುದ್ಧ ಹೋರಾಡಲು ತಮಿಳು ರಾಣಿ ವೇಲು ನಾಚಿಯಾರ್ ಗೆ ಹೈದರ್ ಅಲಿ ನೆರವಾಗಿದ್ದರು" ಎಂದರು.
"1799ರಲ್ಲಿ ಟಿಪ್ಪು ಸುಲ್ತಾನ್ ರನ್ನು ಬ್ರಿಟಿಷರು ಕೊಂದರು ಮತ್ತು ತಮಿಳು ಹೋರಾಟಗಾರ ಕಟ್ಟಬೊಮ್ಮನ್ ರನ್ನು ಗಲ್ಲಿಗೇರಿಸಲಾಯಿತು. 2012ರಲ್ಲಿ ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದು ತನ್ನದೇ ಹೊಸ ಪಕ್ಷ ಸ್ಥಾಪಿಸಿದರು. ಈ ಸಂದರ್ಭ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಖಡ್ಗ ಪ್ರದರ್ಶಿಸಿ ತಾನು ಟಿಪ್ಪುವಿನಂತೆ ಮತ್ತೊಮ್ಮೆ ಉದಯಿಸುತ್ತೇನೆ ಎಂದಿದ್ದರು. 19ನೆ ಶತಮಾನದಲ್ಲಿ ಟಿಪ್ಪುವಿನ ಬಗ್ಗೆ ಹಲವು ನಾಟಕಗಳು ನಡೆಯುತ್ತಿದ್ದವು, ಲಾವಣಿಗಳನ್ನು ಹಾಡಲಾಗುತ್ತಿತ್ತು. 1970ರಲ್ಲಿ ಆರೆಸ್ಸೆಸ್ ಪ್ರಕಟಿಸಿದ 'ಭಾರತ ಭಾರತಿ' ಪುಸ್ತಕದಲ್ಲಿ ಟಿಪ್ಪುವನ್ನು ಹೊಗಳಲಾಗಿತ್ತು. ಆದರೆ ಈಗ ಬಿಜೆಪಿ ಟಿಪ್ಪುವನ್ನು ದ್ವೇಷಿಸುತ್ತಿರುವುದೇಕೆ" ಎಂದು ಪ್ರಶ್ನಿಸಿದರು.
18ನೆ ಶತಮಾನದಲ್ಲೇ ಟಿಪ್ಪು ಮೀಸಲಾತಿಯನ್ನು ಜಾರಿಗೆ ತಂದಿದ್ದರು. 'ಇಂದಿನಿಂದ ಜಾರಿಗೆ ಬರುವಂತೆ ಮೈಸೂರು ಸಂಸ್ಥಾನದಲ್ಲಿ ಯಾರ ವಿರುದ್ಧವೂ ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ನಾವು ಘೋಷಿಸುತ್ತಿದ್ದೇವೆ' ಎಂದು ಟಿಪ್ಪು ಹೇಳಿದ್ದರು. 1787ರ ಟಿಪ್ಪು ಸರಕಾರದ ಘೋಷಣೆಯ ಪುಸ್ತಕದಲ್ಲಿ ಈ ಮಾತುಗಳಿವೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಾ ಹೇಳಿದರು.
"ಧಾರ್ಮಿಕ ಸಹಿಷ್ಣುತೆ ಪವಿತ್ರ ಕುರ್ ಆನ್ ನ ಮೂಲಭೂತ ತತ್ವಗಳಲ್ಲೊಂದು ಎಂದು ಟಿಪ್ಪು ಹೇಳಿದ್ದರು. ತನ್ನ ಆಡಳಿತದ ವಿರುದ್ಧವಿದ್ದ ಕಾರಣ ಮಂಗಳೂರಿನ ಕ್ರೈಸ್ತರು ಟಿಪ್ಪು ಆಡಳಿತದಲ್ಲಿ ಬಂಧನದಲ್ಲಿದ್ದರು. ಅವರು ರಾಜಕೀಯ ಕೈದಿಗಳಾಗಿ ಇದ್ದರೇ ಹೊರತು, ಧಾರ್ಮಿಕ ಕೈದಿಗಳಾಗಿ ಇರಲಿಲ್ಲ. ಕೈಸ್ತ ಕೈದಿಗಳಿಗೆ ಪಾದ್ರಿ ಇಲ್ಲದ ಕಾರಣ ಪೋರ್ಚುಗೀಸ್ ಸರಕಾರಕ್ಕೆ ಪತ್ರ ಬರೆದಿದ್ದ ಟಿಪ್ಪು ಪಾದ್ರಿಯೊಬ್ಬರನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಇದೂ ಕೂಡ ದಾಖಲೆಯಲ್ಲಿದೆ" ಎಂದು ತಿರುಚಿ ಶಿವ ಹೇಳಿದರು.