'ಸಾಮಾಜಿಕ ಜಾಲತಾಣ ಬಳಕೆ ಇಲ್ಲ, ಭದ್ರತಾ ಏಜನ್ಸಿಗಳಿಗೆ ಬಳಕೆದಾರರ ಮಾಹಿತಿ'

Update: 2019-11-25 14:44 GMT

ಶ್ರೀನಗರ:  ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ನಂತರ ಇದೀಗ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಲು  ಸರಕಾರ ಟೆಲಿಕಾಂ ಕಂಪೆನಿಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಕಂಪೆನಿಗಳು ತಾವು ಸಹಿ ಹಾಕಿದ ಬಾಂಡ್ ಸರಕಾರಕ್ಕೆ ನೀಡಬೇಕಿದ್ದು ಅಂತರ್ಜಾಲ ಬಳಕೆ 'ವ್ಯವಹಾರ ಉದ್ದೇಶಗಳಿಗೆ' ಮಾತ್ರ ನೀಡಲಾಗುವುದು ಎಂದು ಅದರಲ್ಲಿ ಸ್ಪಷ್ಟವಾಗಿ ನಮೂದಿಸಬೇಕಿದೆ. ಅಂತರ್ಜಾಲದ ಎಲ್ಲಾ `ಮಾಹಿತಿ' ಹಾಗೂ `ಸಾಧನ'ಗಳ ಮಾಹಿತಿಯನ್ನು ಭದ್ರತಾ ಏಜನ್ಸಿಗಳಿಗೆ ಕೇಳಿದಾಗ ಒದಗಿಸಬೇಕೆಂಬ ಷರತ್ತನ್ನೂ ಕಂಪೆನಿಗಳು ಒಪ್ಪಬೇಕಿದೆ ಎಂದು 'ದಿ ವೈರ್' ವರದಿ ಮಾಡಿದೆ.

ಯಾವುದೇ ವೀಡಿಯೋ ಅಥವಾ ಫೋಟೋ ಇರುವ ಯಾವುದೇ ಎನ್ಕ್ರಿಪ್ಟೆಡ್ ಫೈಲ್ ಅಪ್ಲೋಡ್ ಮಾಡುವ ಹಾಗಿಲ್ಲ, ಸೋಶಿಯಲ್ ನೆಟ್ವರ್ಕಿಂಗ್, ಪ್ರಾಕ್ಸಿ, ವಿಪಿಎನ್ ಹಾಗೂ ವೈಫೈ ಬಳಸಬಾರದು ಹಾಗೂ ಎಲ್ಲಾ ಯುಎಸ್‍ಬಿ ಪೋರ್ಟ್‍ಗಳನ್ನು ಡಿಸೇಬಲ್ ಮಾಡಬೇಕು ಎಂಬ ನಿಯಮಗಳೂ ಈ ಬಾಂಡ್ ನಲ್ಲಿ ನಮೂದಿಸಲಾಗಿದೆ.

ಯಾವುದೇ ರೀತಿಯಲ್ಲಿ ಅಂತರ್ಜಾಲ ದುರ್ಬಳಕೆಯಾದರೆ ಯಾ ಷರತ್ತುಗಳು ಉಲ್ಲಂಘನೆಯಾದರೆ ಅದಕ್ಕೆ ಕಂಪೆನಿಗಳೇ ಜವಾಬ್ದಾರಿ ಹೊರಬೇಕೆಂದೂ ಆಡಳಿತ ಹೇಳಿದೆ ಎಂಬ ಮಾಹಿತಿಯಿದೆ.

ಕಳೆದೊಂದು ವಾರದ ಅವಧಿಯಲ್ಲಿ ಹೋಟೆಲ್‍ಗಳು, ಅತಿಥಿ ಗೃಹಗಳು, ಟ್ರಾವೆಲ್ ಏಜನ್ಸಿಗಳು ಹಾಗೂ ಕೆಲವೊಂದು ಸರಕಾರಿ ಕಚೇರಿಗಳ ಅಂತರ್ಜಾಲ ಸೇವೆಗಳನ್ನು ಮರುಸ್ಥಾಪಿಸಲಾಗಿದೆಯಾದರೂ ಅವುಗಳನ್ನು ಕೇವಲ ಉದ್ಯಮ ಉದ್ದೇಶಗಳಿಗೆ  ಮಾತ್ರ ಬಳಸಲಾಗುವುದು ಎಂಬ ಷರತ್ತಿನ ಆಧಾರದಲ್ಲಿ ಮರುಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News