ಶ್ರೀಲಂಕಾದ ಉನ್ನತ ತನಿಖಾಧಿಕಾರಿ ಜಿನೀವಾಕ್ಕೆ ಪಲಾಯನ
ಕೊಲಂಬೊ, ನ. 25: ಹಿಂದಿನ ರಾಜಪಕ್ಸ ಸರಕಾರದ ಆಡಳಿತದ ಅವಧಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಿರ್ವಹಿಸಿದ ಶ್ರೀಲಂಕಾದ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿ ಆಡಳಿತ ಬದಲಾವಣೆಯ ಬಳಿಕ ಜಿನೀವಾಕ್ಕೆ ಪಲಾಯನ ಮಾಡಿದ್ದಾರೆ.
ಯಾವುದೇ ಅನುಮತಿ ಪಡೆಯದೆ ತನಿಖಾಧಿಕಾರಿ ನಿಶಾಂತ ಸಿಲ್ವಾ ಶನಿವಾರ ದೇಶವನ್ನು ಹೇಗೆ ತೊರೆದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಮೂಲಗಳು ತಿಳಿಸಿವೆ. 2015 ರಿಂದ ರಾಜಪಕ್ಸ ಕುಟುಂಬದ ಸದಸ್ಯರು ಮತ್ತು ಉನ್ನತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಇತರ ತನಿಖೆಗಳಲ್ಲಿ ಸಿಲ್ವಾ ಉನ್ನತ ಮಟ್ಟದ ತನಿಖೆ ನಡೆಸಿದ್ದರು.
ನ.16 ರ ಚುನಾವಣೆಯ ನಂತರ ದೇಶದ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಗೋಟಬಯ ರಾಜಪಕ್ಸ ಅವರು ನಿನ್ನೆ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ, ತನ್ನ ವಿರುದ್ಧ ರಾಜಕೀಯ ಪ್ರೇರಿತ ತನಿಖೆ ನಡೆಸಿದ ಮುಖ್ಯ ತನಿಖಾಧಿಕಾರಿ ದೇಶದಿಂದ ಪಲಾಯನ ಮಾಡಿದ್ದಾರೆ ಹೇಳಿದ್ದಾರೆ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಹಿರಿಯ ಸಹೋದರ ಮಹಿಂದಾ ರಾಜಪಕ್ಸ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶ್ರೀಲಂಕಾದ ವಿವಾದಾತ್ಮಕ ರಾಜಪಕ್ಸ ಬಣ ರಾಜಕೀಯ ಅಧಿಕಾರದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದೆ. ಸಿಲ್ವಾ ಹೊಸ ಆಡಳಿತದಿಂದ ಪ್ರತೀಕಾರಕ್ಕೆ ಹೆದರಿ ದೇಶದಿಂದ ಪಲಾಯನ ಮಾಡಿದ್ದಾರೆಂದು ತಿಳಿದು ಬಂದಿದೆ.
ದೇಶದಿಂದ ಹೊರಡುವಾಗ ಎಲ್ಲಾ ಪೊಲೀಸ್ ಅಧಿಕಾರಿಗಳು ಸಚಿವಾಲಯದ ಕಾರ್ಯದರ್ಶಿಯಿಂದ ಅನುಮೋದನೆ ಪಡೆಯಬೇಕು. ಈ ಅಧಿಕಾರಿ ಹಾಗೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ತನಿಖೆ ನಡೆಸುವಲ್ಲಿ ಸಿಲ್ವಾ ಅವರ ಪಕ್ಷಪಾತದ ನಡವಳಿಕೆಯನ್ನು ಎತ್ತಿ ತೋರಿಸಲಾಗಿದೆ ಮತ್ತು ಅನೇಕ ಪಕ್ಷಗಳು ಆತನ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಂಡಿವೆ ಎಂದು ಅದು ಹೇಳಿದೆ.
ಸಿಲ್ವಾ ನಡೆಸಿದ ಎಲ್ಲಾ ತನಿಖೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಪ್ರತಿಪಕ್ಷದಲ್ಲಿದ್ದಾಗ ಪ್ರಸ್ತುತ ಸರಕಾರದ ಧುರೀಣರು ಆರೋಪಿಸಿದ್ದರು. ಪೊಲೀಸ್ ಪ್ರಧಾನ ಕಚೇರಿಯು ಸಿಐಡಿ ನಿರ್ದೇಶಕರಿಗೆ ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ನ್ಯೂಸ್ ಒನ್ ವರದಿ ಮಾಡಿದೆ.
ಸಿಲ್ವಾ ಅವರ ವಿದೇಶ ಪ್ರವಾಸವನ್ನು ಪೊಲೀಸ್ ಶಿಸ್ತಿನ ಉಲ್ಲಂಘನೆ ಎಂದು ಹೇಳಿರುವ ಎಸ್‌ಎಸ್ಪಿ ರುವಾನ್ ಗುಣಶೇಖರ ಅವರು ಸಿಲ್ವಾ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಪರಾಧ ತನಿಖಾ ವಿಭಾಗದ ಪೊಲೀಸ್ ಅಧಿಕಾರಿ ಶಾನಿ ಅಭೈಸೇಕರ ಅವರನ್ನು ರಾಜಧಾನಿಯಿಂದ ದಕ್ಷಿಣ ಪ್ರಾಂತ್ಯಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.