ವಾತಾವರಣದಲ್ಲಿ ದಾಖಲೆಯ ಮಟ್ಟ ತಲುಪಿದ ಹಸಿರುಮನೆ ಅನಿಲ: ವಿಶ್ವಸಂಸ್ಥೆ ವರದಿ
ಜಿನೇವಾ, ನ.25: ಜಾಗತಿಕ ತಾಪಮಾನ ಬದಲಾವಣೆಗೆ ಮುಖ್ಯ ಚಾಲಕಶಕ್ತಿಯೆನ್ನಲಾದ ಹಸಿರುಮನೆ ಅನಿಲ (ಗ್ರೀನ್‌ಹೌಸ್ ಗ್ಯಾಸ್) ಕಳೆದ ವರ್ಷ ದಾಖಲೆಯ ಮಟ್ಟವನ್ನು ತಲುಪಿದೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.
ಭವಿಷ್ಯದಲ್ಲಿ ಮನುಕುಲದ ಕಲ್ಯಾಣಕ್ಕಾಗಿ ಹಸಿರುಮನೆಯ ಪರಿಣಾಮದ ವಿರುದ್ಧ ಕ್ರಿಯಾಯೋಜನೆಯನ್ನು ರೂಪಿಸುವ ಅಗತ್ಯವಿದೆಯೆಂದು ಅದು ಹೇಳಿದೆ.
ಹಸಿರುಮನೆ ಅನಿಲದ ಮಟ್ಟದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಡಂಬಡಿಕೆಯಡಿ ಹಸಿರುಮನೆ ಅನಿಲ ನಿಯಂತ್ರಣಕ್ಕೆ ಹಲವು ಬದ್ಧತೆಗಳನ್ನು ವ್ಯಕ್ತಪಡಿಸಿದ ಹೊರತಾಗಿಯೂ ಅವುಗಳ ಸಾಂಧ್ರತೆಯಲ್ಲಿ ಯಾವುದೇ ಇಳಿಕೆಯಾಗಿಲ್ಲವೆಂದು ವಿಶ್ವಹವಾಮಾನ ಸಂಸ್ಥೆಯ ಪೆಟ್ಟೆರಿ ತಾಲಾಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವು 2018ರಲ್ಲಿ 407.8 ಪಿಪಿಎಂ ಆಗಿತ್ತೆಂದು ವಿಶ್ವಹವಾಮಾನ ಸಂಸ್ತೆಯ ವಾರ್ಷಿಕ ಹಸಿರುಮನೆ ಬುಲೆಟಿನ್ ಪಟ್ಟಿ ಮಾಡಿದೆ.2017ರಲ್ಲಿ ವಾತಾವರಣದಲ್ಲಿ ಕಾರ್ಬನ್‌ಡಯಾಕ್ಸೈಡ್‌ನ ಪ್ರಮಾಣವು 405 ಪಿಪಿಎಂ ಆಗಿತ್ತೆಂದು ಅದು ಹೇಳಿದೆ.
2018ರಲ್ಲಿ ಭೂಮಿಯ ವಾತಾವರಣದಲ್ಲಿ ಇನ್ನೆರಡು ಪ್ರಮುಖ ಹಸಿರು ಮನೆ ಅನಿಲಗಳಾದ ಮಿಥೇನ್ ಹಾಗೂ ನೈಟ್ರಸ್ ಆಕ್ಸೈಡ್‌ನ ಪ್ರಮಾಣ ಕೂಡಾ ದಾಖಲೆಯ ಮಟ್ಟದಲ್ಲಿ ಏರಿಕೆಯನ್ನು ಕಂಡಿದೆಯೆಂದು ವರದಿ ತಿಳಿಸಿದೆ.