ಸ್ಥಳೀಯರ ಆಕ್ಷೇಪ: ಮುಸ್ಲಿಮರಿಗೆ ಮನೆ ಮಾರಟ ಕೈ ಬಿಟ್ಟ ಮಾಲಕ
ವಡೊದರಾ, ನ. 25: ಗುಜರಾತ್‌ನ ವಡೋದರಾದ ವಾಸ್ನಾ ಪ್ರದೇಶದ ರೆಸಿಡೆನ್ಸಿಯಲ್ ಸೊಸೈಟಿ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೆಸಿಡೆನ್ಸಿಯಲ್ ಸೊಸೈಟಿಯಲ್ಲಿ ಮನೆ ಹೊಂದಿರುವ ವ್ಯಕ್ತಿಯೋರ್ವರು ತನ್ನ ಮನೆಯನ್ನು ಮುಸ್ಲಿಮರೊಬ್ಬರಿಗೆ ಮಾರಾಟ ಮಾಡುವ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.
‘ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆ’ ನಿಯಮಗಳು ಹಿಂದೂ ಪ್ರಾಬಲ್ಯ ಹೊಂದಿದ ಪ್ರದೇಶದ ಸೊತ್ತನ್ನು ಮುಸ್ಲಿಮರಿಗೆ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ. ಅಲ್ಲದೆ, ಇಂತಹ ಸೊತ್ತಿನ ಮಾರಾಟಕ್ಕೆ ನೆರೆ ಹೊರೆಯವರ ಅನುಮತಿ ಬೇಕಾಗುತ್ತದೆ. ಇದರ ಆಧಾರದಲ್ಲಿ ಸಮರ್ಪಣ ಸೊಸೈಟಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸ್ಥಳದಲ್ಲಿದ್ದರು. ಈ ಸೊಸೈಟಿಯಲ್ಲಿ ಪ್ರಸ್ತುತ 170 ಮನೆಗಳು ಇವೆ. 2017ರಲ್ಲಿ 2 ಮನೆಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಲಾಗಿದೆ. ಇನ್ನೊಂದು ಮನೆಯನ್ನು ಮುಸ್ಲಿಮರೊಬ್ಬರಿಗೆ 99 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.
ಜೆಪಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಮರ್ಪಣ್ ಸೊಸೈಟಿಯನ್ನು 2014ರಲ್ಲಿ ‘ತೊಂದರೆಗೊಳಗಾದ ಪ್ರದೇಶ’ ಎಂದು ಘೋಷಿಸಲಾಗಿತ್ತು. ಇದರಂತೆ ಸ್ಥಿರ ಆಸ್ತಿ ವರ್ಗಾವಣೆ ಮಾಡಲು ಸೊಸೈಟಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಯ ನಿರಾಪೇಕ್ಷಣಾ ಪ್ರಮಾಣ ಪತ್ರದ ಅಗತ್ಯ ಇದೆ.