ದಿಲ್ಲಿ ವಾಯು ಮಾಲಿನ್ಯ: ಸ್ಫೋಟಕ ಇರಿಸಿ ಎಲ್ಲರನ್ನೂ ಕೊಂದು ಬಿಡಿ ಎಂದ ಸುಪ್ರೀಂ ಕೋರ್ಟ್

Update: 2019-11-25 17:48 GMT

 ಹೊಸದಿಲ್ಲಿ, ನ. 24: ತನ್ನ ಆದೇಶದ ಹೊರತಾಗಿಯೂ ಬೆಳೆ ತ್ಯಾಜ್ಯ ದಹನ ನಿಗ್ರಹಿಸಲು ವಿಫಲವಾಗಿರುವುದಕ್ಕೆ ಸುಪ್ರೀಂ ಕೋರ್ಟ್ ಪಂಜಾಬ್ ಹಾಗೂ ಹರ್ಯಾಣ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ದಿಲ್ಲಿಯ ವಾಯು ಗುಣಮಟ್ಟ ಸುಧಾರಿಸುವಲ್ಲಿ ಕೇಂದ್ರದ ನಿಷ್ಕ್ರಿಯತೆ ಬಗ್ಗೆ ಸುಪ್ರೀಂ ಕೋರ್ಟ್, ಜನರನ್ನು ಗ್ಯಾಸ್ ಚೇಂಬರ್‌ನಲ್ಲಿ ವಾಸಿಸಲು ಏಕೆ ಒತ್ತಾಯಿಸುತ್ತೀರಿ ಎಂದು ಪ್ರಶ್ನಿಸಿತು.

 ‘‘ಇದಕ್ಕಿಂತ ಅವರೆಲ್ಲರನ್ನೂ ಒಂದೇ ಬಾರಿಗೆ ಕೊಲ್ಲುವುದು ಉತ್ತಮ. 15 ಚೀಲ ಸ್ಫೋಟಕಗಳನ್ನು ತೆಗೆದುಕೊಳ್ಳಿ ಹಾಗೂ ಒಂದೇ ಬಾರಿಗೆ ಅವರೆಲ್ಲರನ್ನು ಕೊಂದು ಬಿಡಿ. ಇದಕ್ಕೆಲ್ಲ ಜನರು ಯಾಕೆ ತೊಂದರೆಗೊಳಗಾಗಬೇಕು ?’’ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ, ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ಇದು ಲಕ್ಷಾಂತರ ಜನರ ಜೀವಿತಾವಧಿಯನ್ನು ಕಡಿಮೆ ಮಾಡಿದೆ. ಅಲ್ಲದೆ, ದಿಲ್ಲಿ-ಎನ್‌ಸಿಆರ್‌ನ ಮಾಲಿನ್ಯದಿಂದ ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಜನರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯೇ ? ಮಾಲಿನ್ಯದಿಂದ ಅವರು ಸಾಯಲು ಬಿಡುವುದೇ ? ಎಂದು ಪೀಠ ಪ್ರಶ್ನಿಸಿದೆ.

ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಅವರನ್ನು ಮೊದಲು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ‘‘ನಿಮ್ಮ ರಾಜ್ಯವನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದಕ್ಕೆ ನಿಮ್ಮ ಮೇಲೆ ಯಾಕೆ ದಂಡ ವಿಧಿಸಬಾರದು ಎಂಬ ಬಗ್ಗೆ ನೀವು ವಿವರಿಸಬೇಕು. ನಮ್ಮ ಆದೇಶದ ಹೊರತಾಗಿಯೂ ಇದು ಮತ್ತೆ ಸಂಭವಿಸಿದೆ’’ ಎಂದು ಹೇಳಿತು.

ನಾವು ಇದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿ ಅವರು ವಿವರಣೆ ನೀಡಲು ಪ್ರಯತ್ನಿಸುತ್ತಿರುವಾಗ ನ್ಯಾಯಮೂರ್ತಿ ಮಿಶ್ರಾ, ಬೆಳೆ ತ್ಯಾಜ್ಯ ದಹನ ಈಗಲೂ ರಾಜ್ಯದಲ್ಲಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪಂಜಾಬ್‌ನ ಮುಖ್ಯ ಕಾರ್ಯದರ್ಶಿ, ಕೆಲವು ಸಂದರ್ಭ ಬೆಳೆ ತ್ಯಾಜ್ಯ ದಹನ ನಡೆಯುತ್ತಿದೆ ಎಂದರು. ದಿಲ್ಲಿಯಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಪ್ರತಿವರ್ಷ ಇದು ನಡೆಯುತ್ತಿದೆ. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಇದು ಮುಂದಿನ ವರ್ಷ ಕೂಡ ನಡೆಯುತ್ತದೆ ಎಂದು ಪೀಠ ಹೇಳಿತು. ಬೆಳೆ ತ್ಯಾಜ್ಯ ದಹವನ್ನು ನಿಯಂತ್ರಿಸದೇ ಇರುವುದಕ್ಕೆ ಹರ್ಯಾಣದ ಮುಖ್ಯ ಕಾರ್ಯದರ್ಶಿ ಅವರನ್ನು ಕೂಡ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News