ಚುನಾವಣಾ ಬಾಂಡ್‌ಗಳ ಗುಪ್ತಸಂಖ್ಯೆಯನ್ನು ಎಸ್‌ಬಿಐ ದಾಖಲಿಸಿಕೊಳ್ಳುವುದು ಬಹಿರಂಗ
ಹೊಸದಿಲ್ಲಿ, ನ.25: ಚುನಾವಣಾ ಬಾಂಡ್‌ಗಳ ರಹಸ್ಯ ಕೋಡ್‌ಗಳನ್ನು ಅವುಗಳನ್ನು ವಿತರಿಸುವ ಎಸ್‌ಬಿಐ ದಾಖಲಿಸಿಕೊಳ್ಳುತ್ತದೆ ಎನ್ನುವುದು ಸುದ್ದಿ ಜಾಲತಾಣ ‘ದಿ ಕ್ವಿಂಟ್’ಗೆ ಲಭಿಸಿರುವ ಆರ್‌ಟಿಐ ಉತ್ತರದಿಂದ ಬಟಾಬಯಲಾಗಿದೆ. ಇದರೊಂದಿಗೆ ಸರಕಾರವು ಈ ಹಿಂದೆ ಸುಳ್ಳು ಹೇಳಿಕೆಯನ್ನು ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸಿತ್ತು ಎನ್ನುವುದೂ ಬಹಿರಂಗಗೊಂಡಿದೆ.
ಚುನಾವಣಾ ಬಾಂಡ್‌ಗಳು ಹೊಂದಿರುವ,ಕೇವಲ ಅಲ್ಟ್ರಾವಯಲೆಟ್ ಕಿರಣಗಳ ಮೂಲಕ ಗೋಚರವಾಗುವ ವಿಶಿಷ್ಟ,ರಹಸ್ಯ,ಆಲ್ಫಾನ್ಯುಮರಿಕ್ ಅಥವಾ ಅಕ್ಷರಸಂಖ್ಯಾಯುಕ್ತ ಕೋಡ್‌ಗಳಿಂದಾಗಿ ಎಲ್ಲ ಚುನಾವಣಾ ಬಾಂಡ್‌ಗಳ ಜಾಡನ್ನು ಪತ್ತೆ ಹಚ್ಚಬಹುದಾಗಿದೆ ಎಂದು ದಿ ಕ್ವಿಂಟ್ ಎಪ್ರಿಲ್ 2018ರಷ್ಟು ಹಿಂದೆಯೇ ತನ್ನ ವರದಿಯಲ್ಲಿ ಬಯಲುಗೊಳಿಸಿತ್ತು.
ಈ ವರದಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ ವಿತ್ತ ಸಚಿವಾಲಯವು ‘ಖರೀದಿದಾರ ಅಥವಾ ನಿರ್ದಿಷ್ಟ ಚುನಾವಣಾ ಬಾಂಡ್‌ನ್ನು ಸಲ್ಲಿಸುವ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಲ್ಲಿ ಎಸ್‌ಬಿಐ ಈ ರಹಸ್ಯ ಕೋಡ್‌ನ್ನು ನಮೂದಿಸುವುದಿಲ್ಲ ’ಎಂಬ ಮಾಧ್ಯಮ ಹೇಳಿಕೆಯೊಂದನ್ನು ಹೊರಡಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸಿತ್ತು.
ಆದರೆ ದಿ ಕ್ವಿಂಟ್ ಈಗ ಆರ್‌ಟಿಐ ಕಾಯ್ದೆಯಡಿ ಎಸ್‌ಬಿಐನಿಂದ ಪಡೆದುಕೊಂಡಿರುವ ದಾಖಲೆಗಳು ಬೇರೆಯದೇ ಕಥೆಯನ್ನು ಹೇಳುತ್ತಿವೆ. ರಹಸ್ಯ ಆಲ್ಪಾನ್ಯುಮರಿಕ್ ಕೋಡ್‌ನ್ನು ಎಸ್‌ಬಿಐ ದಾಖಲಿಸಿಕೊಳ್ಳುತ್ತದೆ ಎನ್ನುವುದನ್ನು ಈ ದಾಖಲೆಗಳು ತೋರಿಸಿವೆ. ಚುನಾವಣಾ ಬಾಂಡ್‌ಗಳ ವಿತರಣೆಯ ಹೊಣೆಯನ್ನು ಎಸ್‌ಬಿಐ ಹೊಂದಿದೆ.
ವಾಸ್ತವದಲ್ಲಿ ವಿತ್ತ ಸಚಿವಾಲಯವೇ ರಹಸ್ಯ ಕೋಡ್‌ನ್ನು ದಾಖಲಿಸಿಕೊಳ್ಳಲು ಎಸ್‌ಬಿಐಗೆ ಅವಕಾಶ ನೀಡಿತ್ತು ಮತ್ತು ಯಾವುದೇ ರೀತಿಯಲ್ಲಿ ಅದು ಸೋರಿಕೆಯಾಗದಂತೆ ಅತ್ಯಂತ ರಹಸ್ಯವಾಗಿರಿಸುವಂತೆ ಅದಕ್ಕೆ ಸೂಚಿಸಿತ್ತು ಎನ್ನುವುದನ್ನು ಈ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿವೆ.
ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ನೀಡುವವರಿಗೆ ಯಾವುದೇ ಕಿರುಕುಳವಾಗದಂತೆ ನೋಡಿಕೊಳ್ಳಲು ಬಾಂಡ್‌ಗಳ ಮೇಲೆ ಕ್ರಮಸಂಖ್ಯೆಯನ್ನು ಅಗೋಚರ ಶಾಯಿಯಿಂದ ಗುರುತಿಸಲಾಗುತ್ತದೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಖಜಾಂಚಿ ಪಿಯೂಷ ಗೋಯಲ್ ಅವರು ನ.21ರಂದು ಸುದ್ದಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ರಹಸ್ಯ ಕೋಡ್ ಅನ್ನು ಎಸ್‌ಬಿಐ ದಾಖಲಿಸಿಕೊಳ್ಳುತ್ತದೆ ಎನ್ನುವುದನ್ನು ಉಲ್ಲೇಖಿಸಲಿಲ್ಲ.