ವಿಮಾನ ಅಪಹರಿಸಿ ಅದರಲ್ಲಿದ್ದ ಸರಂಜಾಮುಗಳೊಂದಿಗೆ ಪರಾರಿಯಾದ ಸಶಸ್ತ್ರ ದುಷ್ಕರ್ಮಿಗಳು
Update: 2019-11-26 17:08 IST
ಕೊಕೊಪೊ: ಪಾಪುವಾ ನ್ಯೂ ಗಿನೀ ಚಾರ್ಟರ್ಡ್ ವಿಮಾನವನ್ನು ಮಂಗಳವಾರ ಅಪಹರಿಸಿದ ಸಶಸ್ತ್ರ ದುಷ್ಕರ್ಮಿಗಳ ತಂಡವೊಂದು ನಿರ್ಜನ ಪ್ರದೇಶದಲ್ಲಿನ ಬಳಕೆಯಲ್ಲಿಲ್ಲದ ನಿಲ್ದಾಣದಲ್ಲಿ ವಿಮಾನವನ್ನು ಇಳಿಸುವಂತೆ ಪೈಲಟ್‍ನನ್ನು ಬಲವಂತಪಡಿಸಿ ವಿಮಾನ ಭೂಸ್ಪರ್ಶ ಮಾಡಿದ ನಂತರ ಆದರಲ್ಲಿನ ಸರಂಜಾಮುಗಳೊಂದಿಗೆ ಪರಾರಿಯಾಗಿದ್ದಾರೆ.
ನ್ಯೂ ಬ್ರಿಟನ್ ದ್ವೀಪದ ಗಸ್ಮಾಟ ಎಂಬಲ್ಲಿ ವಿಮಾನಕ್ಕೆ ಇಂಧನ ತುಂಬಿಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಎಂಟು ಮಂದಿ ಸಶಸ್ತ್ರ ವ್ಯಕ್ತಿಗಳ ತಂಡ ಪೈಲಟ್ ಗೆ ಅಲ್ಲಿಂದ ಹೊರಡುವಂತೆ ಬಲವಂತ ಪಡಿಸಿದ್ದರೆಂದು ಟ್ರಾಪಿಕ್ ಏರ್ ಹೇಳಿಕೊಂಡಿದೆ.
ನಂತರ ತಾವು ಹೇಳಿದ ಸ್ಥಳದಲ್ಲಿ ಪೈಲಟ್ ವಿಮಾನವನ್ನು ಇಳಿಸಿದ ಕೂಡಲೇ ಆದರಲ್ಲಿದ್ದ ಲಗೇಜ್ ಹಾಗೂ ಸರಕಿನೊಂದಿಗೆ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಪೈಲಟ್ ಅಥವಾ ವಿಮಾನಕ್ಕೆ ಯಾವುದೇ ಹಾನಿಯುಂಟಾಗಿಲ್ಲ. ಘಟನೆಯ ಬಗ್ಗೆ ಅಲ್ಲಿನ ಆಡಳಿತ ತನಿಖೆ ಆರಂಭಿಸಿದೆ.