ಭಾರತದ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ತೊಡಗುವುದಿಲ್ಲ: ಶ್ರೀಲಂಕಾ ಅಧ್ಯಕ್ಷ
ಶ್ರೀಲಂಕಾ, ನ. 26: ಶ್ರೀಲಂಕಾವು ಭಾರತ ಮತ್ತು ಚೀನಾ ಎರಡೂ ದೇಶಗಳ ಜೊತೆಗೆ ವ್ಯವಹರಿಸುವುದು ಹಾಗೂ ‘ಸೂಪರ್‌ಪವರ್‌ಗಳ ಪಾರಮ್ಯದ ಹೋರಾಟದ ನಡುವೆ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ’ ಎಂದು ಆ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸ ಹೇಳಿದ್ದಾರೆ.
ಮಾಜಿ ರಕ್ಷಣಾ ಕಾರ್ಯದರ್ಶಿಯೂ ಆಗಿರುವ ಗೋತಬಯ ರಾಜಪಕ್ಸ ಸೋಮವಾರ ಸ್ಟ್ರಾಟಜಿಕ್ ನ್ಯೂಸ್ ಇಂಟರ್‌ನ್ಯಾಶನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನವೆಂಬರ್ 16ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 13 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
‘‘ಭಾರತದ ಕಳವಳಗಳ ಮಹತ್ವವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ, ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯಲ್ಲಿ ನಾವು ತೊಡಗುವುದಿಲ್ಲ’’ ಎಂದು ಗೋತಬಯ ತಿಳಿಸಿದರು.
‘‘ಭಾರತ ದೊಡ್ಡ ಶಕ್ತಿ ಹಾಗೂ ದೊಡ್ಡ ದೇಶ. ನಾವು ಬೇರೆ ದೇಶಗಳ ಅಭಿಪ್ರಾಯಗಳನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಅದರಂತೆ ನಡೆದುಕೊಳ್ಳಬೇಕು’’ ಎಂದರು.
ಶ್ರೀಲಂಕಾ ತಟಸ್ಥವಾಗಿದ್ದುಕೊಂಡು ಇತರ ದೇಶಗಳೊಂದಿಗೆ ವ್ಯವಹರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಚೀನಾ-ಪರ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಗೋತಬಯ ಹೇಳಿದರು. ‘‘ನಾವು ತುಂಬಾ ಚಿಕ್ಕವರು. ಸಮತೋಲನವನ್ನು ಸಾಧಿಸದೆ ಹೋದರೆ ನಾವು ಬದುಕಲು ಸಾಧ್ಯವಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.
“ಹಂಬನ್‌ತೋಟ ಬಂದರು ಒಪ್ಪಂದ ಮರುಪರಿಶೀಲನೆಗೆ ಚೀನಾವನ್ನು ಒತ್ತಾಯಿಸುವೆ”
ಇಂದಿನ ಜಾಗತಿಕ ರಾಜಕೀಯದಲ್ಲಿ ಹಿಂದೂ ಮಹಾಸಾಗರ ಮಹತ್ವದ ಪಾತ್ರ ವಹಿಸಿದೆ ಎಂದು ಗೋತಬಯ ರಾಜಪಕ್ಸ ಹೇಳಿದರು.
ಹಿಂದೂ ಮಹಾಸಾಗರದ ಅತ್ಯಂತ ವ್ಯೂಹಾತ್ಮಕ ಸ್ಥಳದಲ್ಲಿ ಶ್ರೀಲಂಕಾವಿದೆ ಎಂದು ಹೇಳಿದ ಅವರು, ಎಲ್ಲ ಸಮುದ್ರ ಮಾರ್ಗಗಳು ದ್ವೀಪ ರಾಷ್ಟ್ರದ ಸಮೀಪದಲ್ಲೇ ಹಾದು ಹೋಗುತ್ತವೆ ಎಂದರು.
‘‘ಸಮುದ್ರ ಮಾರ್ಗಗಳು ಯಾವುದೇ ಒಂದು ದೇಶದ ನಿಯಂತ್ರಣದಲ್ಲಿ ಇರಬಾರದು. ಹಿಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹಂಬನ್‌ತೋಟ ಬಂದರನ್ನು ಚೀನಾಕ್ಕೆ 99 ವರ್ಷಗಳ ಲೀಸ್‌ಗೆ ಕೊಟ್ಟು ತಪ್ಪು ಮಾಡಿದರು. ಈ ಒಪ್ಪಂದಕ್ಕೆ ಸಂಬಂಧಿಸಿ ಮರುಸಂಧಾನವನ್ನು ನಡೆಸುವಂತೆ ನಾನು ಶ್ರೀಲಂಕಾವನ್ನು ಒತ್ತಾಯಿಸುತ್ತೇನೆ’’ ಎಂದು ಅವರು ನುಡಿದರು.
‘‘ಹೂಡಿಕೆ ಮಾಡುವುದಕ್ಕಾಗಿ ಸಣ್ಣ ಸಾಲವನ್ನು ಕೊಡುವುದು ಬೇರೆ ವಿಷಯ. ಆದರೆ ವ್ಯೂಹಾತ್ಮಕವಾಗಿ ಮಹತ್ವದ ಆರ್ಥಿಕ ಬಂದರನ್ನು ಕೊಡುವುದು ಸ್ವೀಕಾರಾರ್ಹವಲ್ಲ’’ ಎಂದರು.
2017ರಲ್ಲಿ, ಸಾಲ ವಿನಿಮಿಯದ ಭಾಗವಾಗಿ ಶ್ರೀಲಂಕಾವು ಈ ಬಂದರನ್ನು ಚೀನಾಕ್ಕೆ ಬಿಟ್ಟುಕೊಟ್ಟಿತ್ತು. ಚೀನಾವು ಶ್ರೀಲಂಕಾದೊಂದಿಗಿನ ಸಂಬಂಧವನ್ನು ವೃದ್ಧಿಗೊಳಿಸುತ್ತಿದೆ ಹಾಗೂ ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾ ಪಡೆಯ ಉಪಸ್ಥಿತಿಯನ್ನು ವಿಸ್ತರಿಸುತ್ತಿದೆ.