ದಲಿತ ವ್ಯಕ್ತಿಯ ಕಸ್ಟಡಿ ಸಾವಿನ ಪ್ರಕರಣ: ಗುಜರಾತ್ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ತರಾಟೆ

Update: 2019-11-26 15:28 GMT

ಹೊಸದಿಲ್ಲಿ, ನ.26: ಗುಜರಾತ್‌ನ ಅಮ್ರೇಲಿ ಜೈಲಿನಲ್ಲಿ 2017ರಲ್ಲಿ ನಡೆದ ಕಸ್ಟಡಿ ಸಾವಿನ ಪ್ರಕರಣದ ತನಿಖಾ ವರದಿಯನ್ನು ಇನ್ನೂ ಸಲ್ಲಿಸದ ಬಗ್ಗೆ ಗುಜರಾತ್ ಪೊಲೀಸ್ ಪ್ರಧಾನ ನಿರ್ದೇಶಕರನ್ನು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ತರಾಟೆಗೆತ್ತಿಕೊಂಡಿದೆ.

ಇದೊಂದು ಸಂವೇದನಾಹೀನ, ಬೇಜವಾಬ್ದಾರಿಯ ವರ್ತನೆಯಾಗಿದೆ ಎಂದು ಎನ್‌ಆರ್‌ಸಿ ತೀವ್ರ ಅಸಮಾಧಾನ ಸೂಚಿಸಿದೆ. 2017ರಲ್ಲಿ ನಡೆದಿದ್ದ 30 ವರ್ಷದ ದಲಿತ ವ್ಯಕ್ತಿಯ ಕಸ್ಟಡಿ ಸಾವಿನ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಹಲವು ಬಾರಿ ನೋಟಿಸ್ ಕಳಿಸಿದ್ದರೂ ಗುಜರಾತ್ ಪೊಲೀಸ್ ಪ್ರಧಾನ ನಿರ್ದೇಶಕ(ಬಂಧೀಖಾನೆ) ಇದಕ್ಕೆ ವಿಫಲರಾಗಿದ್ದಾರೆ ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.

ಅಮ್ರೇಲಿಯ ದಂಗಾರ್ ಗ್ರಾಮದ ನಿವಾಸಿ ಜಿಗ್ನೇಶ್ ಸೊಂದರ್ವ(30 ವರ್ಷ) ಎಂಬಾತ ಸಾರಾಯಿ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದಲ್ಲಿ 2017ರ ಜುಲೈ 12ರಂದು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಆತನಿಗೆ 3 ದಿನದ ನ್ಯಾಯಾಂಗ ಬಂಧನ ವಿಧಿಸಿ ಅಮ್ರೇಲಿ ಉಪಠಾಣೆಯಲ್ಲಿ ಇರಿಸಲಾಗಿತ್ತು. ಜುಲೈ 15ರಂದು ಸಂಶಯಾಸ್ಪದ ರೀತಿಯಲ್ಲಿ ಈತ ಅಮ್ರೇಲಿ ಸಿವಿಲ್ ಆಸ್ಪತ್ರೆಯಲ್ಲಿ ಮೃತನಾಗಿದ್ದ. ತಲೆಗೆ ಬಿದ್ದ ಏಟಿನಿಂದ ಈತ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಜೈಲಿನಲ್ಲಿ ನಾಲ್ವರು ಸಹಖೈದಿಗಳ ಹಲ್ಲೆಯಿಂದ ಈತ ಮೃತಪಟ್ಟಿರುವುದಾಗಿ ಜಿಗ್ನೇಶ್‌ನ ಕುಟುಂಬದವರು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿ ನಾಲ್ವರು ಸಹಖೈದಿಗಳನ್ನು ಬಂಧಿಸಲಾಗಿತ್ತು.

ಪ್ರಕರಣದ ಬಗ್ಗೆ ಗಮನ ಹರಿಸಿ ಮೃತ ವ್ಯಕ್ತಿಯ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರ ಮತ್ತು ಕುಟುಂಬದ ಒಬ್ಬ ವ್ಯಕ್ತಿಗೆ ಸರಕಾರಿ ಉದ್ಯೋಗ ಒದಗಿಸುವಂತೆ ಕೋರಿ ದಲಿತ ಹೋರಾಟಗಾರ ಕಾಂತಿಲಾಲ್ ಪರ್ಮಾರ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದ. ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎನ್‌ಎಚ್‌ಆರ್‌ಸಿ ಗುಜರಾತ್ ಪೊಲೀಸರಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News