21 ಭ್ರಷ್ಟ ತೆರಿಗೆ ಅಧಿಕಾರಿಗಳ ಕಡ್ಡಾಯ ನಿವೃತ್ತಿ

Update: 2019-11-26 17:11 GMT
PTI

 ಹೊಸದಿಲ್ಲಿ, ನ. 26: ಭ್ರಷ್ಟಾಚಾರ ಹಾಗೂ ಇತರ ದುಷ್ಕೃತ್ಯದ ಆರೋಪ ಹೊತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಐದನೇ ಹಂತವಾಗಿ 21 ಭ್ರಷ್ಟ ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ.

 ವಿದೇಶಿ ಆದಾಯ ಹಾಗೂ ಕಾರ್ಪೋರೇಟ್ ತೆರಿಗೆ ಸಂಗ್ರಹದ ಮೇಲ್ವಿಚಾರಣೆ ನೋಡಿಕೊಳ್ಳುವ ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ಇಲಾಖೆ ಅಧಿಕಾರಿ ಶ್ರೇಣಿಯ 21 ಬಿ ಗುಂಪಿನ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಜೂನ್‌ನಿಂದ ಭ್ರಷ್ಟ ಅಧಿಕಾರಿಗಳನ್ನು ವಜಾಗೊಳಿಸುವ ಐದನೇ ಹಂತ ಇದಾಗಿದೆ. ಇದರೊಂದಿಗೆ 34 ಉನ್ನತ ಶ್ರೇಣಿಯ ತೆರಿಗೆ ಅಧಿಕಾರಿಗಳು ಸೇರಿದಂತೆ 64 ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ. ಉನ್ನತ ಶ್ರೇಣಿಯ ಅಧಿಕಾರಿಗಳಲ್ಲಿ 12 ಮಂದಿ ಸಿಬಿಡಿಟಿ ಅಧಿಕಾರಿಗಳು.

ಕೊನೆಯ ಹಂತವಾಗಿ ಸೆಪ್ಟಂಬರ್‌ನಲ್ಲಿ ಜಿಎಸ್‌ಟಿ ಹಾಗೂ ಆಮದು ತೆರಿಗೆ ಸಂಗ್ರಹಿಸುವ ಪರೋಕ್ಷ ತೆರಿಗೆ ಹಾಗೂ ಕಂದಾಯದ ಕೇಂದ್ರ ಮಂಡಳಿ (ಸಿಬಿಐಸಿ)ಯ 15 ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News