ಗದ್ದುಗೆಗೆ ಏರುವ ಮುನ್ನವೇ ಪ್ರಧಾನಿ ಮೋದಿಗೆ ಆಘಾತ ನೀಡಿದ ಶಿವಸೇನೆ ಹೇಳಿದ್ದೇನು?

Update: 2019-11-27 15:24 GMT
ಉದ್ಧವ್ ಠಾಕ್ರೆ

ಮುಂಬೈ, ನ. 27 : ಬಿಜೆಪಿಗೆ ಭಾರೀ ಮುಖಭಂಗ ಮಾಡಿ ಮಹಾರಾಷ್ಟ್ರದ ಅಧಿಕಾರದ ಗದ್ದುಗೆಗೆ ಏರಲು ಸಜ್ಜಾಗಿರುವ ಶಿವಸೇನೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಆಘಾತ ನೀಡಲು ಮುಂದಾದ ಲಕ್ಷಣಗಳಿವೆ. 

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಮುಂಬೈ ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ ನಮ್ಮ ಆದ್ಯತೆಯಲ್ಲ, ನಮ್ಮ ಆದ್ಯತೆ ರೈತರು ಎಂದು ಶಿವಸೇನಾ ನಾಯಕ , ಈ ಹಿಂದಿನ ಬಿಜೆಪಿ - ಸೇನಾ ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದ ದೀಪಕ್ ಕೆಸರ್ಕರ್ ಹೇಳಿಕೆ ನೀಡಿದ್ದಾರೆ. ಶಿವಸೇನಾ ನಾಯಕ ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಮಾಜಿ ಮೈತ್ರಿ ಪಕ್ಷಕ್ಕೆ ಆಘಾತ ನೀಡುವ ಮುನ್ಸೂಚನೆ ಇದು ಎಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ಸೆಪ್ಟೆಂಬರ್ 2017 ರಲ್ಲಿ ಪ್ರಧಾನಿ ಮೋದಿ ಹಾಗು ಜಪಾನ್ ಪ್ರಧಾನಿ ಶಿಂಝೋ ಅಬೆ ಈ ಬುಲೆಟ್ ಟ್ರೈನ್ ಗೆ ಶಿಲಾನ್ಯಾಸ ನೆರವೇರಿಸಿದ್ದರು.

ಮುಂಬೈಯಿಂದ ಅಹ್ಮದಾಬಾದ್ ಗೆ ಪ್ರಯಾಣಿಸಲು 3500 ಕೋಟಿ ರೂಪಾಯಿ ಖರ್ಚು ಮಾಡುವ ಬದಲು ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ಹೇಳುವ ಮೂಲಕ ಕೆಸರ್ಕರ್ ಬಿಜೆಪಿ ಹಾಗು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ. 

ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಪಕ್ಷಗಳು ರಚಿಸಿರುವ ‘ಮಹಾವಿಕಾಸ್ ಅಘಾಡಿ’ಯ ಸಾಮಾನ್ಯ ಕನಿಷ್ಟ ಕಾರ್ಯಕ್ರಮವು ರೈತರ, ಕಾರ್ಮಿಕರ, ಮಹಿಳೆಯರ, ಯುವಕರ ಬಗ್ಗೆ ಗಮನ ಕೇಂದ್ರೀಕರಿಸಿದೆ ಎಂದು ದೀಪಕ್ ಕೇಸರ್ಕರ್ ಹೇಳಿದ್ದಾರೆ. ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ - ಇವರಲ್ಲಿ ಯಾರ ಬಳಿ ಸರಕಾರದ ರಿಮೋಟ್ ಕಂಟ್ರೋಲ್ ಇರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ಜನತೆಯ ಹಿತದೃಷ್ಟಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವಂತೆ ಶರದ್ ಪವಾರ್ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಜಪಾನ್‌ನ ಸಹಯೋಗದಲ್ಲಿ ನಿರ್ಮಾಣವಾಗಲಿರುವ 1.08 ಲಕ್ಷ ಕೋಟಿ ವೆಚ್ಚದ ಬುಲೆಟ್ ಟ್ರೈನ್ ಯೋಜನೆಗೆ 2017ರ ಸೆಪ್ಟೆಂಬರ್ 14ರಂದು ಮುಂಬೈಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ. ಯೋಜನೆಯ ವೆಚ್ಚದ 81% ಮೊತ್ತವನ್ನು ಜಪಾನ್‌ನ ಸಂಸ್ಥೆ ಹಾಗೂ ಉಳಿದ ಮೊತ್ತವನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಸರಕಾರ ಭರಿಸಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 150 ಕಿ.ಮೀ ದೂರದ ರೈಲ್ವೇ ಮಾರ್ಗ ನಿರ್ಮಿಸಬೇಕಿದ್ದು ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News