ಬ್ಯಾಂಕಿನೊಳಗೆ ನಿಮ್ಮ ಹಣ ಕಳ್ಳತನವಾದರೆ ಅದನ್ನು ನೀವು ಬ್ಯಾಂಕಿನಿಂದ ವಸೂಲು ಮಾಡಬಹುದೇ?

Update: 2019-11-27 13:10 GMT
ಸಾಂದರ್ಭಿಕ ಚಿತ್ರ

ನೀವು ಹಣವನ್ನು ಜಮೆ ವಾಡಲು ಬ್ಯಾಂಕ್ ಶಾಖೆಗೆ ತೆರಳಿದ್ದಾಗ ಬ್ಯಾಂಕಿನ ಆವರಣದಲ್ಲಿ ನಿಮ್ಮ ಹಣವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದಿಟ್ಟುಕೊಳ್ಳಿ. ಇಂತಹ ಸಂದರ್ಭದಲ್ಲಿ ನಿಮ್ಮ ಹಣದ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಬ್ಯಾಂಕನ್ನು ಹೊಣೆಯಾಗಿಸಬಹುದೇ?

ರಾಷ್ಟ್ರೀಯ ಗ್ರಾಹಕ ದೂರು ಇತ್ಯರ್ಥ ಆಯೋಗ (ಎನ್‌ಸಿಡಿಆರ್‌ಸಿ)ದ ಇತ್ತೀಚಿನ ಆದೇಶದಂತೆ ಬ್ಯಾಂಕಿನ ಆವರಣದಲ್ಲಿ ಗ್ರಾಹಕರ ಹಣದ ಕಳ್ಳತನವಾದರೆ ಅದಕ್ಕೆ ಬ್ಯಾಂಕು ಹೊಣೆಯಾಗಬೇಕಾಗುತ್ತದೆ. ದಿಲ್ಲಿಯ ಎಸ್‌ಬಿಐ ಶಾಖೆಯೊಂದರ ಆವರಣದಲ್ಲಿ ಗ್ರಾಹಕರೋರ್ವರು ಕಳ್ಳರ ಕೈಚಳಕದಿಂದ 76,000 ರೂ.ಗಳನ್ನು ಕಳೆದುಕೊಂಡಿದ್ದ ಪ್ರಕರಣದಲ್ಲಿ ಆಯೋಗವು ಈ ಆದೇಶವನ್ನು ಹೊರಡಿಸಿದೆ. ಗ್ರಾಹಕರ ಕುರಿತು ಬ್ಯಾಂಕು ವಹಿಸಬೇಕಾದ ಕಾಳಜಿಯ ಕರ್ತವ್ಯದಲ್ಲಿ ಬ್ಯಾಂಕಿನ ಆವರಣದಲ್ಲಿ ಅವರು ಜಮೆ ಮಾಡುವ ಮತ್ತು ಹಿಂದೆಗೆದುಕೊಳ್ಳುವ ಹಣದ ಸುರಕ್ಷತೆಯೂ ಸೇರಿದೆ ಎನ್ನುವುದನ್ನು ಆಯೋಗವು ಎತ್ತಿ ಹಿಡಿದಿದೆ.

ಏನಿದು ಪ್ರಕರಣ?:

ದೂರುದಾರರು ದಿಲ್ಲಿಯ ಚಾಂದ್ನಿ ಚೌಕ್ ಎಸ್‌ಬಿಐ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು,2016,ಮಾ.28ರಂದು ತನ್ನ ಖಾತೆಗೆ 76,000 ರೂ.ಗಳನ್ನು ಜಮೆ ಮಾಡಲು ಈ ಶಾಖೆಗೆ ಭೇಟಿ ನೀಡಿದ್ದರು. ಬ್ಯಾಂಕಿನೊಳಗೆ ನಗದು ಕೌಂಟರ್‌ನ ಎದುರು ಸಾಲಿನಲ್ಲಿ ನಿಂತಿದ್ದ ಅವರು ತನ್ನ ಸರದಿ ಬಂದಾಗ ಹಣವನ್ನು ತೆಗೆಯಲು ಜೇಬಿಗೆ ಕೈಹಾಕಿದ್ದರು. ಆದರೆ ಜೇಬಿನಲ್ಲಿದ್ದ ತಲಾ 1,000 ರೂ.ಗಳ 76 ನೋಟುಗಳು ಮಂಗಮಾಯವಾಗಿದ್ದವು. ಸಣ್ಣ ಬಟ್ಟೆಯ ತುಂಡಿನಲ್ಲಿ ಸುತ್ತಿರಿಸಿದ್ದ ನೋಟುಗಳನ್ನು ಸಾಲಿನಲ್ಲಿ ಅವರ ಹಿಂದೆ ನಿಂತಿದ್ದ ವ್ಯಕ್ತಿ ಎಗರಿಸಿಕೊಂಡು ಪರಾರಿಯಾಗಿದ್ದ.

ಗ್ರಾಹಕರು 2016,ಎ.28ರಂದು ಐಪಿಸಿಯ ಕಲಂ 379/341ರಡಿ ಎಫ್‌ಐಆರ್ ದಾಖಲಿಸಿದ್ದರು. ಅವರು ಬ್ಯಾಂಕಿನ ಸಿಸಿಟಿವಿ ಕ್ಯಾಮರಾದಿಂದ ಸಂಬಂಧಿಸಿದ ಚಿತ್ರವನ್ನೂ ತನ್ನ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿಕೊಂಡಿದ್ದರು. ಮುಂದಿನ ಮೂರು ತಿಂಗಳ ಕಾಲ ಅವರು ಪೊಲೀಸರಿಗೆ ಹಲವಾರು ಬಾರಿ ತನ್ನ ದೂರಿನ ಬಗ್ಗೆ ನೆನಪಿಸಿದ್ದರೂ ಕಳ್ಳನ ಅಥವಾ ಕಳ್ಳತನವಾಗಿದ್ದ ಹಣದ ಜಾಡು ಪತ್ತೆಯಾಗಿರಲಿಲ್ಲ. ಜಿಲ್ಲಾ ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ ಗ್ರಾಹಕರು,ಬ್ಯಾಂಕಿನ ಆವರಣದಲ್ಲಿ ತಾನು ಹಣವನ್ನು ಕಳೆದುಕೊಂಡಿರುವುದರಿಂದ ಸೂಕ್ತ ಭದ್ರತೆಯನ್ನು ಒದಗಿಸದಿದ್ದಕ್ಕಾಗಿ ತನಗಾಗಿರುವ ನಷ್ಟಕ್ಕೆ ಬ್ಯಾಂಕನ್ನು ಹೊಣೆಯಾಗಿಸುವಂತೆ ತನ್ನ ಅಹವಾಲಿನಲ್ಲಿ ಕೋರಿದ್ದರು.

ಆದರೆ ಘಟನೆಯು ಬ್ಯಾಂಕಿನ ಆವರಣದ ಹೊರಗೆ ನಡೆದಿತ್ತು ಎಂದು ಹೇಳಿದ ಜಿಲ್ಲಾ ವೇದಿಕೆಯು,ಯಾವುದೇ ಕ್ರಿಮಿನಲ್ ಕೃತ್ಯವು ಗ್ರಾಹಕ ವೇದಿಕೆಯ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಕಾರಣವನ್ನು ನೀಡಿ ಪ್ರಕರಣವನ್ನು ವಜಾಗೊಳಿಸಿತ್ತು. ರಾಜ್ಯ ಬಳಕೆದಾರರ ಆಯೋಗವೂ ಗ್ರಾಹಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು.

ಬ್ಯಾಂಕ್ ಹೊಣೆ ಎಂದ ಎನ್‌ಸಿಡಿಆರ್‌ಸಿ:

ತನ್ನ ಕಕ್ಷಿದಾರರು ಬ್ಯಾಂಕಿನ ಹೊರಗೆ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದಾಗ ಹಣವನ್ನು ಕಳೆದುಕೊಂಡಿದ್ದರು ಎಂದು ನಿರ್ಧರಿಸುವ ಮೂಲಕ ಜಿಲ್ಲಾ ಮತ್ತು ರಾಜ್ಯ ಗ್ರಾಹಕ ವೇದಿಕೆಗಳು ತಪ್ಪು ಮಾಡಿವೆ ಎಂದು ಗ್ರಾಹಕರ ಪರ ವಕೀಲರು ಎನ್‌ಸಿಡಿಆರ್‌ಸಿ ಮುಂದೆ ವಾದಿಸಿದ್ದರು. ತನ್ನ ಕಕ್ಷಿದಾರರು ಬ್ಯಾಂಕಿನ ಆವರಣದೊಳಗೆ ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಹಿಂದೆ ನಿಂತಿದ್ದ ವ್ಯಕ್ತಿಯು ಹಣವನ್ನು ಎಗರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದೂ ಅವರು ನಿವೇದಿಸಿದ್ದರು.

ದೂರುದಾರರು ಚಾಲ್ತಿ ಖಾತೆಯನ್ನು ಹೊಂದಿದ್ದಾರೆ ಮತ್ತು ಘಟನೆ ನಡೆದ ಒಂದು ತಿಂಗಳ ಬಳಿಕ ಎಫ್‌ಐಆರ್ ದಾಖಲಿಸಿದ್ದಾರೆ. ತನ್ನ ಎಲ್ಲ ಗ್ರಾಹಕರಿಗೆ ತಾನು ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಬ್ಯಾಂಕು ಬಲವಾಗಿ ವಾದಿಸಿತ್ತು.

ಗ್ರಾಹಕರು 76,000 ರೂ.ಗಳನ್ನು ಕಳೆದುಕೊಂಡಿರುವ ವಿಷಯದಲ್ಲಿ ಯಾವುದೇ ವಿವಾದವಿಲ್ಲ ಮತ್ತು ಸಿಸಿಟಿವಿ ಕ್ಯಾಮರಾ ಅದನ್ನು ದೃಢಪಡಿಸಿದೆ ಮತ್ತು ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ ಎನ್‌ಸಿಡಿಆರ್‌ಸಿ,ದೂರುದಾರರು ಬ್ಯಾಂಕಿನ ಆವರಣದಲ್ಲಿ ಕಳೆದುಕೊಂಡಿರುವ ಹಣಕ್ಕಾಗಿ ಪರಿಹಾರಕ್ಕೆ ಅರ್ಹರೇ ಎನ್ನುವುದು ತನ್ನ ಮುಂದಿರುವ ವಿಷಯವಾಗಿದೆ. ಅವರು ದೂರಿನಲ್ಲಿ ಪರಿಹಾರಕ್ಕೆ ಮಾತ್ರ ಕೋರಿರುವುದರಿಂದ ಮತ್ತು ಕ್ರಿಮಿನಲ್ ಕಲಾಪವು ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಸಂಬಂಧಿಸಿರುವುದರಿಂದ ಇಂತಹ ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕರಣ ಬಾಕಿಯಿರುವಾಗ ದೂರುದಾರರು ಬಳಕೆದಾರ ವೇದಿಕೆಗೆ ದೂರು ಸಲ್ಲಿಸಬಹುದು ಎಂದು ತನ್ನ ಆದೇಶದಲ್ಲಿ ಹೇಳಿದೆ.

ಬ್ಯಾಂಕು ತನ್ನ ಆವರಣದಲ್ಲಿ ಕಳ್ಳತನಕ್ಕೆ ಹೊಣೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಎನ್‌ಸಿಡಿಆರ್‌ಸಿ,ಬ್ಯಾಂಕು ತನ್ನ ಗ್ರಾಹಕರ ಬಗ್ಗೆ ವಹಿಸಬೇಕಾದ ಕಾಳಜಿಯಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಿಸಿಟಿವಿ ಮೂಲಕ ನಿಗಾ,ಗ್ರಾಹಕರು ಜಮೆ ಮಾಡುವ ಮತ್ತು ಹಿಂಪಡೆಯುವ ಹಣದ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಸೇರಿವೆ ಮತ್ತು ಇದು ಬ್ಯಾಂಕು ಗ್ರಾಹಕರಿಗೆ ಒದಗಿಸುವ ಸೇವೆಯ ಭಾಗವಾಗಿದೆ. ಇಲ್ಲಿ ಗ್ರಾಹಕರ ಹಣಕ್ಕೆ ಭದ್ರತೆಯನ್ನು ಒದಗಿಸುವಲ್ಲಿ ಬ್ಯಾಂಕು ವಿಫಲಗೊಂಡಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ದೂರನ್ನು ಪುರಸ್ಕರಿಸಿದ ಎನ್‌ಸಿಡಿಆರ್‌ಸಿ,ಗ್ರಾಹಕರಿಗೆ 50,000 ರೂ.ಪರಿಹಾರ ಮತ್ತು 10,000 ರೂ.ವೆಚ್ಚವನ್ನು ಪಾವತಿಸುವಂತೆ ಬ್ಯಾಂಕಿಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News