ಲೋಕಸಭೆಯಲ್ಲಿ ಗೋಡ್ಸೆ 'ದೇಶಭಕ್ತ' ಎಂದು ಬಣ್ಣಿಸಿದ ಪ್ರಜ್ಞಾಸಿಂಗ್

Update: 2019-11-27 14:46 GMT

ಹೊಸದಿಲ್ಲಿ,ನ.27: ಲೋಕಸಭೆಯಲ್ಲಿ ಬುಧವಾರ ನಡೆದ ಕಲಾಪದ ವೇಳೆ ಮಹಾತ್ಮ ಗಾಂಧೀಜಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ‘ದೇಶಭಕ್ತ’ನೆಂದು ಉಲ್ಲೇಖಿಸಿದ್ದಕ್ಕೆ ಪ್ರತಿಪಕ್ಷಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಯಿತು.

ವಿಶೇಷ ರಕ್ಷಣಾ ತಂಡ (ತಿದ್ದುಪಡಿ) ವಿಧೇಯಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಂದರ್ಭ ಡಿಎಂಕೆ ಸಂಸದ ಎ.ರಾಜಾ ಅವರು ಮಹಾತ್ಮಾ ಗಾಂಧೀಜಿ ಅವರನ್ನು ತಾನು ಯಾಕೆ ಕೊಂದೆ ಎಂಬ ಬಗ್ಗೆ ನಾಥುರಾಮ್ ಗೋಡ್ಸೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು.

ತಾನು 32 ವರ್ಷಗಳಿಂದ ಗಾಂಧೀಜಿ ವಿರುದ್ಧ ದ್ವೇಷಭಾವನೆಯನ್ನು ಹೊಂದಿದ್ದು, ಅಂತಿಮವಾಗಿ ಅವರನ್ನು ಹತ್ಯೆಗೈಯಲು ನಿರ್ಧರಿಸಿದ್ದಾಗಿ ಗೋಡ್ಸೆ ಖುದ್ದಾಗಿ ಒಪ್ಪಿಕೊಂಡಿದ್ದಾರೆಂದು ರಾಜಾ ತಿಳಿಸಿದರು.

ಗೋಡ್ಸೆ ನಿರ್ದಿಷ್ಟ ಸಿದ್ಧಾಂತವೊಂದರಲ್ಲಿ ನಂಬಿಕೆಯಿರಿಸಿದ್ದರಿಂದ ಆತ ಗಾಂಧೀಜಿಯವರನ್ನು ಹತ್ಯೆಗೈದನೆಂದು ರಾಜಾ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಪ್ರಜ್ಞಾಸಿಂಗ್ ಠಾಕೂರ್, "ನೀವು ದೇಶಭಕ್ತನನ್ನು ಉದಾಹರಣೆಯಾಗಿ ನೀಡಕೂಡದು" ಎಂದು ಹೇಳಿದರು.

ಕೂಡಲೇ ಪ್ರತಿಪಕ್ಷಗಳ ಸದಸ್ಯರು ಠಾಕೂರ್ ಅವರ ಮಧ್ಯಪ್ರವೇಶಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಆಗ ಬಿಜೆಪಿ ಸದಸ್ಯರು ಆಕೆಯನ್ನು ಆಸನದಲ್ಲಿ ಕುಳಿತುಕೊಳ್ಳುವಂತೆ ಮನವೊಲಿಸಿದರು.

ವ್ಯಕ್ತಿಗೆ ನೀಡುವ ಭದ್ರತೆಯು ಆತ ಎದುರಿಸುತ್ತಿರುವ ಬೆದರಿಕೆಯ ಅಂಶವನ್ನು ಆಧರಿಸಿರಬೇಕೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎಂದು ಅಭಿಪ್ರಾಯಿಸಿದರು. ಪ್ರಧಾನಿಯವರನ್ನು ಹೊರತುಪಡಿಸಿ ಉಳಿದವರಿಗೆ ಎಸ್‌ಪಿಜಿ ಭದ್ರತೆಯನ್ನು ಹಿಂತೆಗೆದುಕೊಳ್ಳುವ ವಿಧೇಯಕವನ್ನು ಮರುಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವರನ್ನು ರಾಜಾ ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News