ಈ ಒಂದು ಪದ ಬೇಡ ಎಂದು ಕಾಂಗ್ರೆಸ್, ಎನ್ ಸಿಪಿಯನ್ನು ಒಪ್ಪಿಸಿದ ಶಿವಸೇನೆ !

Update: 2019-11-28 07:53 GMT

ಮುಂಬೈ: ಮಹಾರಾಷ್ಟ್ರದಲ್ಲಿ ತ್ರಿಪಕ್ಷ ಮೈತ್ರಿಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಅಂತಿಮಪಡಿಸಲಾಗಿದ್ದು, ಇದರಲ್ಲಿ 'ಜಾತ್ಯತೀತ' ಎಂಬ ಪದವನ್ನು ಉಲ್ಲೇಖಿಸದಂತೆ ಕಾಂಗ್ರೆಸ್ ಪಕ್ಷದ ಮನವೊಲಿಸುವಲ್ಲಿ ಶಿವಸೇನೆ ಯಶಸ್ವಿಯಾಗಿದೆ. ಎನ್‍ ಸಿಪಿ ಮೈತ್ರಿಕೂಟದ ಇನ್ನೊಂದು ಪಕ್ಷ.

ಮೈತ್ರಿಕೂಟದ ಮುಖಂಡರಾದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವರು.

ಮಹಾರಾಷ್ಟ್ರ ವಿಕಾಸ್ ಅಗಾಢಿಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಲಾಗಿದ್ದು, ಎಲ್ಲರ ಪ್ರಗತಿ ಮತ್ತು ರೈತರ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಪ್ರಮುಖವಾಗಿ ವಿವರಿಸಲಾಗಿದೆ.

ಕಾಂಗ್ರೆಸ್ ಮುಖಂಡರೊಬ್ಬರು ಸ್ಪೀಕರ್ ಸ್ಥಾನ ವಹಿಸಿಕೊಳ್ಳಬೇಕು ಎಂದು ಮಿತ್ರಕೂಟದ ಮುಖಂಡರು ಒಮ್ಮತಕ್ಕೆ ಬಂದಿದ್ದಾರೆ. ಪೃಥ್ವಿರಾಜ್ ಚವ್ಹಾಣ್ ಅಥವಾ ಅಶೋಕ್ ಚವ್ಹಾಣ್ ಈ ಹುದ್ದೆ ಅಲಂಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಪ್ರಮಾಣ ವಚನ ಸ್ವೀಕರಿಸುವ ಇಬ್ಬರು ಕಾಂಗ್ರೆಸ್ ಮುಖಂಡರ ಹೆಸರನ್ನು ನೀಡುವಂತೆ ಉದ್ಧವ್ ಠಾಕ್ರೆ ಕೇಳಿದ್ದಾರೆ ಎನ್ನಲಾಗಿದೆ. ಬಾಳಾಸಾಹೇಬ್ ಥೋರಟ್ ಅವರ ಹೆಸರನ್ನು ಪಕ್ಷ ಈಗಾಗಲೇ ಅಂತಿಮಪಡಿಸಿದೆ. ಸಂಜೆ 7ಕ್ಕೆ ಠಾಕ್ರೆ ಪ್ರಮಾಣವಚನ ಸ್ವೀಕರಿಸುವ ಮುನ್ನ ಸಿಎಂಪಿ ಬಿಡುಗಡೆ ಮಾಡಲಾಗುವುದು. 59 ವರ್ಷ ವಯಸ್ಸಿನ ಠಾಕ್ರೆ, ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News