ಎಫ್‌ಐಆರ್‌ನಲ್ಲಿ ಸರಳ ಭಾಷೆ ಬಳಸಿ ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ತಾಕೀತು

Update: 2019-11-28 15:34 GMT

ಹೊಸದಿಲ್ಲಿ, ನ.28: ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಗಳನ್ನು ಸಲ್ಲಿಸುವಾಗ ಅತ್ಯಂತ ಸರಳ ಭಾಷೆಯನ್ನು ಬಳಸುವಂತೆ ಹಾಗೂ ಉರ್ದು ಭಾಷೆ ಹಾಗೂ ಪರ್ಷಿಯನ್ ಪದಗಳನ್ನು ಯಾಂತ್ರಿಕವಾಗಿ ಬಳಸದಂತೆ ನೋಡಿಕೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಸ್ಥಳೀಯ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.

ಪೊಲೀಸರು ಅಸಾಮಾನ್ಯವಾದ ಪದಗಳನ್ನು ಬಳಸುತ್ತಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ದಿಲ್ಲಿ 10 ಪೊಲೀಸ್ ಠಾಣೆಗಳಲ್ಲಿ ದಾಖಲಿ ಸಲಾದ ಎಫ್‌ಐಆರ್‌ಗಳ 10 ಪ್ರತಿಗಳನ್ನು ತನ್ನ ಮುಂದೆ ಹಾಜರುಪಡಿಸಬೇಕೆಂದು ಅದು ಪೊಲೀಸ್ ಇಲಾಖೆಗೆ ಆದೇಶಿಸಿದೆ.

ಎಫ್‌ಐಆರ್‌ಗಳಲ್ಲಿ 'ಅಲಂಕಾರಿಕ' ಪದಗಳನ್ನು ಬಳಸುವುದನ್ನು ತಪ್ಪಿಸಬೇಕು ಹಾಗೂ ಸಾಧ್ಯವಿದ್ದಷ್ಟು ಅತ್ಯಂತ ಸರಳವಾದ ಭಾಷೆಯನ್ನು ಬಳಸಬೇಕೆಂದು ನ್ಯಾಯಮೂರ್ತಿಗಳಾದ ಡಿ.ಎನ್.ಪಟೇಲ್ ಹಾಗೂ ಹರಿಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಆದೇಶಿಸಿದೆ.

ಎಫ್‌ಐಆರ್‌ಗಳಲ್ಲಿ ಸರಳವಾದ ಪದಗಳನ್ನು ಬಳಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ವಿಶಾಲಾಕ್ಷಿ ಗೋಯೆಲ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಎಫ್‌ಐಆರ್‌ಗಳನ್ನು ಬರೆಯುವಾಗ ಸರಳವಾದ ಪದಗಳನ್ನು ಬಳಸುವಂತೆ ಹಾಗೂ ಉರ್ದು ಮತ್ತು ಪರ್ಷಿಯನ್ ಪದಗಳನ್ನು ಅನುವಾದ ಕೂಡಾ ಮಾಡುವಂತೆ ಪೊಲೀಸ್ ಇಲಾಖೆಯ ಕಾನೂನು ವಿಭಾಗವು 2019ರ ನವೆಂಬರ್ 20ರಂದು ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. ಪೊಲೀಸರು ಸಾಮಾನ್ಯವಾಗಿ ಎಫ್‌ಐಆರ್‌ಗಳಲ್ಲಿ ಬಳಸುವ 380 ಉರ್ದು/ಪರ್ಷಿಯನ್ ಪದಗಳ ಇಂಗ್ಲಿಷ್ ಅನುವಾದಗಳನ್ನು ಕೂಡಾ ಸುತ್ತೋಲೆಯಲ್ಲಿ ಪಟ್ಟಿ ಮಾಡಲಾಗಿದೆ.

ಪೊಲೀಸರು ಸಮರ್ಪಕವಾಗಿ ಚಿಂತನೆ ಮಾಡದೆಯೇ ಎಫ್‌ಐಆರ್‌ಗಳಲ್ಲಿ ಉರ್ದು ಹಾಗೂ ಪರ್ಷಿಯನ್ ಪದಗಳನ್ನು ಬಳಸುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ. ಬಹಳಷ್ಟು ಮಂದಿ ದೂರುದಾರರಿಗೆ ಉರ್ದು ಪದಗಳ ಅರ್ಥ ಗೊತ್ತಿಲ್ಲದಿರುವುದರಿಂದ ಪ್ರತಿಯೊಬ್ಬ ದೂರುದಾರನಿಗೂ ಎಫ್‌ಐಆರ್‌ನ ಪ್ರತಿಯ ಜೊತೆಗೆ ಉರ್ದು/ಪರ್ಷಿಯನ್ ಪದಗಳ ಆಂಗ್ಲ ಅನುವಾದದ ಪಟ್ಟಿಯನ್ನು ಕೂಡಾ ಒದಗಿಸಬೇಕೆಂದು ಅದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News