ಟರ್ಮಿನಲ್‌ನಲ್ಲೇ ಸ್ನಾನ ಮಾಡುವ ಪ್ರಧಾನಿ ಮೋದಿ: ಅಮಿತ್ ಶಾ ನೀಡಿದ ಮಾಹಿತಿಯಿದು…
ಹೊಸದಿಲ್ಲಿ, ನ.28: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿದೇಶ ಪ್ರಯಾಣದ ಸಂದರ್ಭಗಳಲ್ಲಿ ಅವರಿದ್ದ ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ವಿಮಾನನಿಲ್ದಾಣಗಳಲ್ಲಿ ತಂಗಿದಾಗ, ಅವರು ಐಷಾರಾಮಿ ಪಂಚತಾರಾ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುವ ಬದಲು ವೆಚ್ಚಕಡಿತದ ಸಲುವಾಗಿ ವಿಮಾನನಿಲ್ದಾಣದಲ್ಲೇ ವಿಶ್ರಮಿಸುತ್ತಾರೆ ಹಾಗೂ ವಿಮಾನನಿಲ್ದಾಣದ ಟರ್ಮಿನಲ್‌ನ ಸ್ನಾನದ ಕೊಠಡಿಗಳಲ್ಲಿ ಸ್ನಾನ ಮಾಡುವುದನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಲೋಕಸಭೆಗೆ ತಿಳಿಸಿದರು.
ಬುಧವಾರ ವಿಶೇಷ ರಕ್ಷಣಾ ತಂಡ (ತಿದ್ದುಪಡಿ) ವಿಧೇಯಕದ ಕುರಿತ ಚರ್ಚೆಗೆ ಉತ್ತರಿಸುತ್ತಿದ್ದ ಅವರು, ತನ್ನ ವಿದೇಶ ಪ್ರವಾಸದ ವೇಳೆ ಪ್ರಧಾನಿ ಮೋದಿ, ಶೇ.20ಕ್ಕಿಂತಲೂ ಕಡಿಮೆ ಸಿಬ್ಬಂದಿಯನ್ನು ಕೊಂಡೊಯ್ಯುವ ಪರಿಪಾಠನ್ನು ಆರಂಭಿಸಿದ್ದಾರೆಂದು ತಿಳಿಸಿದರು.
ಸುದೀರ್ಘವಾದ ವಿದೇಶ ಪ್ರವಾಸದ ಸಂದರ್ಭಗಳಲ್ಲಿ ತಾಂತ್ರಿಕ ಕಾರಣ ಗಳಿಂದಾಗಿ ಅಥವಾ ಇಂಧನ ತುಂಬಿಸುವುದಕಾಗಿ ವಿಮಾನವು ನಿಲ್ದಾಣದಲ್ಲಿ ನಿಲ್ಲಬೇಕಾದ ಸನ್ನಿವೇಶ ಬಂದಾಗ, ಮೋದಿಯವರು ವಿಮಾನ ನಿಲ್ದಾಣದಲ್ಲೇ ಉಳಿದುಕೊಳ್ಳುತ್ತಾರೆ. ಅಲ್ಲೇ ಸ್ನಾನ ಮಾಡುತ್ತಾರೆ ಹಾಗೂ ವಿಮಾನಕ್ಕೆ ಇಂಧನವನ್ನು ತುಂಬಿಸಿದ ಬಳಿಕ ಮುಂದಿನ ಪ್ರಯಾಣ ಬೆಳೆಸುತ್ತಾರೆ'' ಎಂದು ಅಮಿತ್ ಶಾ ತಿಳಿಸಿದರು.
ಅಧಿಕಾರಿಗಳ ನಿಯೋಗ ಕೂಡಾ ವಿದೇಶ ಪ್ರವಾಸದ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರುಗಳನ್ನು ಬಳಸಬಾರದೆಂದು ಮೋದಿ ಸೂಚಿಸಿದ್ದಾರೆಂದು ಶಾ ಹೇಳಿದರು.