40 ವರ್ಷಗಳ ಹಿಂದಿನ ವಿಮಾನ ಅಪಘಾತಕ್ಕಾಗಿ ಕ್ಷಮೆ ಕೋರಿದೆ ಈ ದೇಶ

Update: 2019-11-28 16:08 GMT

ವೆಲಿಂಗ್ಟನ್, ನ. 28: 40 ವರ್ಷಗಳ ಹಿಂದೆ ಅಂಟಾರ್ಕ್ಟಿಕದಲ್ಲಿ ವಿಮಾನ ಪತನಗೊಂಡ ಪ್ರಕರಣವನ್ನು ಅಂದಿನ ಸರಕಾರ ನಿಭಾಯಿಸಿದ ರೀತಿಗಾಗಿ ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡ ಆರ್ಡರ್ನ್ ಗುರುವಾರ ಕ್ಷಮೆಯಾಚಿಸಿದ್ದಾರೆ.

1979 ನವೆಂಬರ್ 28ರಂದು ಏರ್ ನ್ಯೂಝಿಲ್ಯಾಂಡ್ ವಿಮಾನವೊಂದು ಅಂಟಾರ್ಕ್ಟಿಕದಲ್ಲಿರುವ ಅಗ್ನಿಪರ್ವತಕ್ಕೆ ಢಿಕ್ಕಿಯಾಗಿ, ಅದರಲ್ಲಿದ್ದ ಎಲ್ಲ 257 ಮಂದಿ ಮೃತಪಟ್ಟಿದ್ದರು. ಆ ವಿಮಾನವು ಆಕ್ಲಂಡ್‌ನಿಂದ ಸ್ಥಳ ವೀಕ್ಷಣೆಗಾಗಿ ಅಂಟಾರ್ಕ್ಟಿಕಕ್ಕೆ ಹೋಗಿತ್ತು.

ಮೃತಪಟ್ಟವರ ಪೈಕಿ ಹೆಚ್ಚಿನವರು ನ್ಯೂಝಿಲ್ಯಾಂಡ್‌ನವರು. ಆರಂಭದಲ್ಲಿ ಪೈಲಟ್‌ನ ತಪ್ಪು ಅಪಘಾತಕ್ಕೆ ಕಾರಣ ಎಂದು ಹೇಳಲಾಯಿತಾದರೂ, ವಿಮಾನದ ಸಿಬ್ಬಂದಿಯ ಗಮನಕ್ಕೆ ತಾರದೆ ವಿಮಾನದ ಚಾಲನೆ ವ್ಯವಸ್ಥೆಯನ್ನು ಸರಕಾರಿ ಒಡೆತನದ ವಿಮಾನಯಾನ ಕಂಪೆನಿಯು ಬದಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎಂಬುದಾಗಿ ತನಿಖಾ ಆಯೋಗವೊಂದು ಹೇಳಿತು.

ಅದೂ ಅಲ್ಲದೆ, ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿಚಾರಣೆಯ ವೇಳೆ ಸುಳ್ಳು ಹೇಳಿದರು ಎಂಬುದಾಗಿಯೂ ಆಯೋಗದ ಅಧ್ಯಕ್ಷ, ಮಾಜಿ ನ್ಯಾಯಾಧೀಶ ಪೀಟರ್ ಮ್ಯಾಹನ್ ಹೇಳಿದರು. ಈ ಹಿನ್ನೆಲೆಯಲ್ಲಿ, ವರದಿಯನ್ನು ಏರ್ ನ್ಯೂಝಿಲ್ಯಾಂಡ್ ಮತ್ತು ಸರಕಾರ ಟೀಕಿಸಿದವು.

''ಅಂದಿನ ಸರಕಾರ ಮತ್ತು ಏರ್‌ಲೈನ್‌ನ ವರ್ತನೆಗಳು ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ನೋವು ಉಂಟು ಮಾಡಿವೆ. ಅದಕ್ಕಾಗಿ 40 ವರ್ಷಗಳ ಬಳಿಕ ಕ್ಷಮೆ ಕೋರುವೆ'' ಎಂದು ಆಕ್ಲಂಡ್‌ನ ಗವರ್ನ್‌ಮೆಂಟ್ ಹೌಸ್‌ನಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆರ್ಡರ್ನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News