ಹಾಂಕಾಂಗ್ ಹೋರಾಟಗಾರರಿಗೆ ಬೆಂಬಲ ನೀಡುವ ಮಸೂದೆಗೆ ಟ್ರಂಪ್ ಸಹಿ

Update: 2019-11-28 16:13 GMT

ವಾಶಿಂಗ್ಟನ್, ನ. 28: ಚೀನಾದ ತೀವ್ರ ವಿರೋಧದ ಹೊರತಾಗಿಯೂ, ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಹೋರಾಟಗಳನ್ನು ನಡೆಸುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸುವ ಸಂಸತ್ತಿನ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಮಸೂದೆಯು ಕಾನೂನಾಗಿ ಪರಿವರ್ತನೆಗೊಂಡಿದೆ.

ಹಾಂಕಾಂಗ್‌ಗೆ ಅಮೆರಿಕ ನೀಡಿರುವ ಪರಮಾಪ್ತ ವ್ಯಾಪಾರ ಸ್ಥಾನಮಾನವನ್ನು ಮುಂದುವರಿಸುವುದಕ್ಕಾಗಿ, ಹಾಂಕಾಂಗ್ ಸಾಕಷ್ಟು ಸ್ವಾಯತ್ತೆಯನ್ನು ಹೊಂದಿದೆ ಎಂಬುದಾಗಿ ಪ್ರತಿ ವರ್ಷ ಅಮೆರಿಕದ ವಿದೇಶಾಂಗ ಇಲಾಖೆ ಪ್ರಮಾಣಪತ್ರ ನೀಡುವುದು ಇನ್ನು ಈ ಕಾನೂನಿನ ಪ್ರಕಾರ ಅಗತ್ಯವಾಗಿದೆ.

ಅಮೆರಿಕದ ಪರಮಾಪ್ತ ವ್ಯಾಪರ ಸ್ಥಾನಮಾನದಿಂದಾಗಿ, ಜಾಗತಿಕ ಆರ್ಥಿಕ ಕೇಂದ್ರ ಎಂಬ ಸ್ಥಾನಮಾನವನ್ನು ಪಡೆಯಲು ಹಾಂಕಾಂಗ್‌ಗೆ ಸಾಧ್ಯವಾಗಿದೆ.

ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಕಳೆದ ವಾರ ಅಮೆರಿಕದ ಸೆನೆಟ್ ಅವಿರೋಧವಾಗಿ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಒಬ್ಬ ಸಂಸದನ ಹೊರತಾಗಿ ಮಿಕ್ಕೆಲ್ಲರೂ ಅನುಮೋದಿಸಿದ್ದರು. ಮಾನವಹಕ್ಕು ಉಲ್ಲಂಘನೆಗಾಗಿ ಹಾಂಕಾಂಗ್ ವಿರುದ್ಧ ದಿಗ್ಬಂಧನ ವಿಧಿಸುವ ಅಧಿಕಾರವನ್ನೂ ಈ ಕಾನೂನು ಅಧ್ಯಕ್ಷರಿಗೆ ನೀಡುತ್ತದೆ.

ಹೋರಾಟಗಾರರ ವಿರುದ್ಧ ಬಳಸಬಹುದಾದ ಅಶ್ರುವಾಯು, ಪೆಪ್ಪರ್ ಸ್ಪ್ರೇ, ರಬ್ಬರ್ ಗುಂಡು ಮತ್ತು ಸ್ಟನ್ ಗನ್‌ಗಳನ್ನು ಹಾಂಕಾಂಗ್‌ಗೆ ರಫ್ತು ಮಾಡುವುದನ್ನು ನಿಷೇಧಿಸುವ ಇನ್ನೊಂದು ಮಸೂದೆಯನ್ನೂ ಕಾಂಗ್ರೆಸ್ ಅಂಗೀಕರಿಸಿತ್ತು. ಅದಕ್ಕೂ ಟ್ರಂಪ್ ಸಹಿ ಹಾಕಿದ್ದಾರೆ.

ಚೀನಾದ ಪ್ರಬಲ ಪ್ರತಿಭಟನೆ

ಹಾಂಕಾಂಗ್‌ನ ಪ್ರಜಾಪ್ರಭುತ್ವ ಹೋರಾಟಗಾರರಿಗೆ ಬೆಂಬಲ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ ಬಳಿಕ ಕೆಂಡಾಮಂಡಲವಾಗಿರುವ ಚೀನಾ, ಅಮೆರಿಕದ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲು ತಾನು ಸಿದ್ಧವಾಗಿದ್ದೇನೆ ಎಂದು ಎಚ್ಚರಿಸಿದೆ.

ಗುರುವಾರ ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡ ವಿದೇಶ ಸಚಿವಾಲಯ,''ಸಂಬಂಧಗಳಿಗೆ ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸಲು ಈ ಕಾನೂನನ್ನು ಕಾರ್ಯರೂಪಕ್ಕೆ ತರುವುದರಿಂದ ಹಿಂದೆ ಸರಿಯುವಂತೆ'' ಒತ್ತಾಯಿಸಿದೆ.

ಹಾಂಕಾಂಗ್ ಮಸೂದೆಗೆ ಟ್ರಂಪ್ ಸಹಿ ಹಾಕಿರುವ ಬಗ್ಗೆ ಚೀನಾದ ಉಪ ವಿದೇಶ ಸಚಿವ ಲೆ ಯುಚೆಂಗ್ ಅಮೆರಿಕ ರಾಯಭಾರಿ ಟೆರಿ ಬ್ರಾನ್‌ಸ್ಟಡ್‌ಗೆ 'ಪ್ರಬಲ ಪ್ರತಿಭಟನೆ'ಯನ್ನು ಸಲ್ಲಿಸಿದರು.

''ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಚೀನಾ ಅಮೆರಿಕವನ್ನು ಬಲವಾಗಿ ಒತ್ತಾಯಿಸುತ್ತದೆ ಎಂದು ಲೆ ಹೇಳಿದರು'' ಎಂದು ಚೀನಾದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News