×
Ad

ಶ್ರೀಲಂಕಾಕ್ಕೆ 400 ಮಿಲಿಯನ್ ಡಾಲರ್ ಸಾಲ ಘೋಷಿಸಿದ ಪ್ರಧಾನಿ ಮೋದಿ

Update: 2019-11-29 20:45 IST

ಹೊಸದಿಲ್ಲಿ, ನ.29: ಶ್ರೀಲಂಕಾದಲ್ಲಿಯ ಅಭಿವೃದ್ಧಿ ಯೋಜನೆಗಳಿಗಾಗಿ 400 ದಶಲಕ್ಷ ಡಾಲರ್ ಸಾಲ ಮತ್ತು ಭಯೋತ್ಪಾದನೆ ನಿಗ್ರಹ ಪ್ರಯತ್ನಗಳಿಗೆ ನೆರವಾಗಲು ಪ್ರತ್ಯೇಕ 50 ದಶಲಕ್ಷ ಡಾ.ಆರ್ಥಿಕ ನೆರವನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಘೋಷಿಸಿದರು.

ಶ್ರೀಲಂಕಾದ ನೂತನ ಅಧ್ಯಕ್ಷ ಗೊತಬಯ ರಾಜಪಕ್ಸ ಅವರು ಅಧಿಕಾರಕ್ಕೇರಿದ ಬಳಿಕ ತನ್ನ ಮೊದಲ ವಿದೇಶ ಪ್ರವಾಸವಾಗಿ ಭಾರತಕ್ಕೆ ಭೇಟಿ ನೀಡಿದ್ದು, ಶುಕ್ರವಾರ ಮೋದಿ ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು. ಬಳಿಕ ಮೋದಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಅವರು, “ನಾವು ಫಲಪ್ರದ ಮಾತುಕತೆಗಳನ್ನು ನಡೆಸಿದ್ದೇವೆ. ಭದ್ರತಾ ಸಹಕಾರ ಮತ್ತು ಆರ್ಥಿಕ ಸಹಕಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆವು” ಎಂದು ತಿಳಿಸಿದರು.

ಶ್ರೀಲಂಕಾದ ನೂತನ ಸರಕಾರವು ರಾಷ್ಟ್ರದಲ್ಲಿನ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಮೋದಿ,ಸ್ಥಿರ ಶ್ರೀಲಂಕಾ ಭಾರತಕ್ಕೆ ಮಾತ್ರವಲ್ಲ,ಸಮಗ್ರ ಹಿಂದೂ ಮಹಾಸಾಗರ ಪ್ರದೇಶದ ಹಿತಾಸಕ್ತಿಗೆ ಅಗತ್ಯವಾಗಿದೆ ಎಂದು ಹೇಳಿದರು.

ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಮೋದಿ ಅವರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಪಕ್ಸ,ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಅತ್ಯಂತ ಎತ್ತರಕ್ಕೆ ಒಯ್ಯಲು ತಾನು ಬಯಸಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News