ಕಾಶ್ಮೀರ: ಪೆಲೆಟ್‌ನಿಂದ ಗಾಯಗೊಂಡವರನ್ನು ಆಕರ್ಷಿಸಲು ವೈದ್ಯರಿಂದ ಹೊಸ ಪ್ರಯತ್ನ

Update: 2019-11-29 15:20 GMT

ಶ್ರೀನಗರ, ನ.29: ಭದ್ರತಾ ಪಡೆಗಳ ಪೆಲೆಟ್ ಗುಂಡೇಟುಗಳಿಂದ ಕಣ್ಣಿಗೆ ಹಾನಿಯಾಗಿರುವವರನ್ನು ಆಕರ್ಷಿಸಲು ಕಣಿವೆಯಲ್ಲಿನ ಖಾಸಗಿ ಆಸ್ಪತ್ರೆಗಳು ರೇಡಿಯೊ,ವೃತ್ತಪತ್ರಿಕೆಗಳು ಮತ್ತು ಹೋರ್ಡಿಂಗ್‌ಗಳ ಮೂಲಕ ಜಾಹೀರಾತು ಅಭಿಯಾನದಲ್ಲಿ ತೊಡಗಿಕೊಂಡಿವೆ.

2016ರಿಂದೀಚಿಗೆ ಕಾಶ್ಮೀರ ಕಣಿವೆಯಲ್ಲಿ ಪೆಲೆಟ್ ಗುಂಡುಗಳಿಂದ ಕಣ್ಣಿಗೆ ಗಾಯಗೊಂಡಿರುವ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು,ನೂರಾರು ಜನರು ತಮ್ಮ ದೃಷ್ಟಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಈ ನತದೃಷ್ಟರಲ್ಲಿ 10 ವರ್ಷ ಪ್ರಾಯದ ಮಕ್ಕಳೂ ಸೇರಿದ್ದಾರೆ.

ಪ್ರತಿ ದಿನ ಪೆಲೆಟ್‌ನಿಂದ ದೃಷ್ಟಿ ನಷ್ಟಗೊಂಡಿರುವ ಸರಾಸರಿ 25 ಪ್ರಕರಣಗಳ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದು ಶ್ರೀನಗರದ ಶಿಫಾ ಮೆಡಿಕಲ್ ಸೆಂಟರ್‌ನ ವೈದ್ಯರು ತಿಳಿಸಿದ್ದಾರೆ.

ಪೆಲೆಟ್ ಗುಂಡೇಟಿನಿಂದ ದೃಷ್ಟಿ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ಜಾಹೀರಾತುಗಳು ಹಲವಾರು ರೋಗಿಗಳನ್ನು ಆಕರ್ಷಿಸುತ್ತಿವೆ. ಕಾಶ್ಮೀರವು ಪೆಲೆಟ್ ಗಾಯಾಳುಗಳನ್ನು ಆಕರ್ಷಿಸಲು ಜಾಹೀರಾತುಗಳನ್ನು ನೀಡುತ್ತಿರುವ ವಿಶ್ವದ ಏಕೈಕ ಸ್ಥಳವಾಗಿರಬಹುದು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.

ಪೆಲೆಟ್ ಗುಂಡೇಟಿನಿಂದ ದೃಷ್ಟಿ ಕಳೆದುಕೊಂಡವರ ಚಿಕಿತ್ಸಾ ವೆಚ್ಚ ತುಂಬ ದುಬಾರಿಯಾಗಿದೆ. ರೋಗಿಯು ಪ್ರತಿ 15 ದಿನಗಳಿಗೆ ಔಷಧಿಗಳಿಗಾಗಿಯೇ 1,500 ರೂ.ನಿಂದ 3,000 ರೂ.ವರೆಗೂ ವ್ಯಯಿಸಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ 50,000 ರೂ.ನಿಂದ 80,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಅವರು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳಿಗೆ ಹಾಜರಾಗಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕಣ್ಣಿಗೆ ಗಾಯಗಳ ಬಳಿಕ ಸಂತ್ರಸ್ತರು ಆಘಾತದಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿರುವುದರಿಂದ ಅವರಿಗೆ ಮನೋವೈಜ್ಞಾನಿಕ ಚಿಕಿತ್ಸೆಯೂ ಅಗತ್ಯವಾಗುತ್ತದೆ.

ಆಗಸ್ಟ್‌ನಲ್ಲಿ ಕೇಂದ್ರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಬ್ರಿಟಿಷ್ ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ತನ್ನ ಸಂಪಾದಕೀಯದಲ್ಲಿ ಕಾಶ್ಮೀರಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. 2016-18ರ ನಡುವೆ ಕಾಶ್ಮೀರದಲ್ಲಿ ಪೆಲೆಟ್ ಗುಂಡೇಟಿನಿಂದ 1,253 ಜನರು ಅಂಧರಾಗಿದ್ದಾರೆ ಎಂದು ಹೇಳಿದ್ದ ಅದು,ಪ್ರದೇಶದಲ್ಲಿ ಸರಕಾರಿ ಭದ್ರತಾ ಪಡೆಗಳು ಮತ್ತು ಸಶಸ್ತ್ರ ಗುಂಪುಗಳು ಸಾರಾಸಗಟಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿತ್ತು.

2016,ಜುಲೈನಲ್ಲಿ ಹಿಝ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಣಿವೆಯಲ್ಲಿ ಅಶಾಂತಿ ಭುಗಿಲೆದ್ದಿದ್ದ ಸಂದರ್ಭದಲ್ಲಿ ಸುಮಾರು 1,725 ಜನರು ಪೆಲೆಟ್‌ಗಳಿಂದ ಗಾಯಗೊಂಡಿದ್ದರು ಎಂದು ಸರಕಾರವು 2017,ನವಂಬರ್‌ನಲ್ಲಿ ತಿಳಿಸಿತ್ತು. ಆದರೆ ಸುಮಾರು 6,000 ಜನರು ಗಾಯಗೊಂಡಿದ್ದು,ಈ ಪೈಕಿ 1,400ಕ್ಕೂ ಅಧಿಕ ಜನರು ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅನಧಿಕೃತ ಅಂದಾಜುಗಳು ತಿಳಿಸಿವೆ.

ಅಧಿಕೃತ ಅಂಕಿಅಂಶಗಳಂತೆ 2018ರಲ್ಲಿ ಕನಿಷ್ಠ 395 ಜನರು ಪೆಲೆಟ್ ಗುಂಡೇಟಿನಿಂದ ಕಣ್ಣುಗಳಿಗೆ ಗಾಯಗೊಂಡಿದ್ದಾರೆ. 2019ರ ಮಾಹಿತಿ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News