ಶನಿವಾರ ಉದ್ಧವ್ ಠಾಕ್ರೆ ಬಹುಮತ ಸಾಬೀತು

Update: 2019-11-29 16:50 GMT
PTI

ಮುಂಬೈ, ನ. 29: ಉದ್ಧವ್ ಠಾಕ್ರೆ ನೇತೃತ್ವದ ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಮೈತ್ರಿ ಸರಕಾರ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಶನಿವಾರ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ.

ಮಹಾರಾಷ್ಟ್ರ ವಿಧಾನ ಸಭೆಯ ಬಹುಮತ ಸಾಬೀತು ಶನಿವಾರ ನಡೆಯುವ ಸಾಧ್ಯತೆ ಇದೆ. ಉದ್ಧವ್ ಠಾಕ್ರೆ ನೇತೃತ್ವದ ನೂತನ ಮಹಾ ವಿಕಾಸ್ ಅಘಾಡಿ ಸರಕಾರ ಶನಿವಾರ ಅಪರಾಹ್ನ 2 ಗಂಟೆಗೆ ಬಹುಮತ ಸಾಬೀತು ಪಡಿಸಲಿದೆ ಎಂದು ವಿಧಾನ ಭವನದ ಮೂಲಗಳು ತಿಳಿಸಿವೆ.

ಈ ನಡುವೆ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಹುಮತ ಸಾಬೀತಿನ ಹಿನ್ನೆಲೆಯಲ್ಲಿ ನೂತನವಾಗಿ ರಚನೆಯಾದ ಸರಕಾರ ಹಂಗಾಮಿ ಸ್ವೀಕರ್‌ರನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.

ಮೈತ್ರಿ ಸರಕಾರ ಬಹುಮತವನ್ನು ಡಿಸೆಂಬರ್ 3ರ ಒಳಗೆ ಸಾಬೀತುಪಡಿಸುವಂತೆ ರಾಜ್ಯಪಾಲ ಬಿ.ಎಸ್. ಕೋಶಿಯಾರಿ ಉದ್ಧವ್ ಠಾಕ್ರೆ ಅವರಿಗೆ ಸೂಚಿಸಿದ್ದಾರೆ. ಶಿವಸೇನೆಯ ಅಧ್ಯಕ್ಷರೂ ಆಗಿರುವ ಉದ್ಧವ್ ಠಾಕ್ರೆ ಗುರುವಾರ ಸಂಜೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದು ಸಂಜೆ ನಡೆದ ಸಂಪುಟ ಸಭೆಯಲ್ಲಿ ಮೊದಲ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಾಲ್ಗೊಂಡಿದ್ದರು. ಉದ್ಧವ್ ಠಾಕ್ರೆ ಅವರಲ್ಲದೆ, ಇತರ 6 ಶಾಸಕರು ಹಾಗೂ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿಯಿಂದ ತಲಾ ಇಬ್ಬರು ಶಾಸಕರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು.

ಕಳೆದ ವಾರ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿ ಸರಕಾರದ ಕನಸನ್ನು ಭಗ್ನಗೊಳಿಸಿದ್ದರು. ಅಲ್ಲದೆ ಬಿಜೆಪಿಯ ದೇವೇಂದ್ರ ಪಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News