ಗ್ರಾಹಕರಲ್ಲಿ ಕಣ್ಣೀರು ತರಿಸಿದ ಈರುಳ್ಳಿ ಬೆಲೆ
ಹೊಸದಿಲ್ಲಿ, ನ. 29: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆ ನಾಗರಿಕರಲ್ಲಿ ಕಣ್ಣೀರು ತರುತ್ತಿರುವುದು ಮಾತ್ರವಲ್ಲ, ದೇಶದಲ್ಲಿ ನೀರಸ ಆರ್ಥಿಕ ಬೆಳವಣಿಗೆ ಬಗ್ಗೆ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ.
ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿರುವುದರಿಂದ ಮನೆಗಳು ಹಾಗೂ ರೆಸ್ಟೋರೆಂಟ್‌ಗಳು ಒತ್ತಡಕ್ಕೆ ಒಳಗಾಗಿವೆ. ದೇಶದಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಚಿಲ್ಲರೆ 1 ಕಿ.ಗ್ರಾಂ. ಈರುಳ್ಳಿ ಬೆಲೆ 90ರಿಂದ 100 ರೂಪಾಯಿ ವರೆಗೆ ದಾಖಲಾಗಿದೆ. ಇದು ಕೋಲ್ಕತ್ತಾ, ಚೆನ್ನೈ, ಮುಂಬೈ, ಒಡಿಶಾ ಹಾಗೂ ಪುಣೆಯಂತಹ ಪ್ರಮುಖ ನಗರಗಳಲ್ಲಿ 120-130 ರೂಪಾಯಿ ವರೆಗೆ ದಾಖಲಾಗಿದೆ.
ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆ ಹೊಸದೇನೂ ಅಲ್ಲ. ಈ ಹಿಂದೆ 2013ರಲ್ಲಿ ಈರುಳ್ಳಿ ಬೆಲೆ ಕಿ.ಗ್ರಾಂ. 100 ರೂಪಾಯಿಗೆ ಏರಿಕೆಯಾಗಿತ್ತು. ದೇಶದ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯ ವರದಿಯಂತೆ, ಇದುವರೆಗಿನ ಏರಿಕೆಯನ್ನು ಹೋಲಿಸಿದರೆ 2019ರಲ್ಲಿ ಈರುಳ್ಳಿ ಬೆಲೆ ಅತಿ ಹೆಚ್ಚು ಏರಿಕೆಯಾಗಿದೆ.
ಈರುಳ್ಳಿ ಬೆಲೆ ಏರಿಕೆಯಿಂದ ಮನೆಗಳಲ್ಲಿ ಮಾತ್ರವಲ್ಲದೆ ರೆಸ್ಟೋರೆಂಟ್‌ಗಳಲ್ಲಿ ಕೂಡ ಈರುಳ್ಳಿ ಬಳಕೆಯ ಪ್ರಮಾಣ ಕಡಿಮೆ ಆಗಿದೆ. ಇದರಿಂದ ವ್ಯಾಪಾರಿಗಳು, ಸಗಟು ವ್ಯಾಪಾರಸ್ತರು, ರೈತರಿಗೆ ಸಮಾನವಾಗಿ ತೊಂದರೆ ಉಂಟಾಗಿದೆ.
ಈರುಳ್ಳಿ ಬೆಲೆ ಏರಿಕೆಯಾಗಿರುವುದರಿಂದ ಕೆಲವರು ಈರುಳ್ಳಿ ಬದಲಿಗೆ ಕ್ಯಾಬೇಜ್ ಹಾಗೂ ಮೂಲಂಗಿ ಬಳಸುತ್ತಿದ್ದಾರೆ. ಆದರೆ, ಈರುಳ್ಳಿಯ ಸ್ಥಾನ ತುಂಬಲು ಈ ತರಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಕೆಲವು ಚಿಲ್ಲರೆ ವ್ಯಾಪಾರಸ್ತರು ಈರುಳ್ಳಿಯನ್ನು ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ, ಗ್ರಾಹಕರು ಅಡುಗೆಯಲ್ಲಿ ಈರುಳ್ಳಿ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ ಅಥವಾ ಗಣನೀಯವಾಗಿ ಕಡಿಮೆ ಮಾಡಿದ್ದಾರೆ.
ದೇಶದ ಎಲ್ಲ ರಾಜ್ಯಗಳಲ್ಲಿ ಗುರುವಾರ 1 ಕಿ.ಗ್ರಾಂ. ಈರುಳ್ಳಿಗೆ ಕನಿಷ್ಠ 90ರಿಂದ 100 ರೂಪಾಯಿ ಪಾವತಿಸಬೇಕಾಗಿತ್ತು. ದಕ್ಷಿಣ ಭಾರತದಲ್ಲಿ ಇದಕ್ಕಿಂತಲೂ ಹೆಚ್ಚಿದ್ದು, ಕಿ.ಗ್ರಾಂ.ಗೆ 130 ರೂಪಾಯಿಗೆ ಏರಿಕೆಯಾಗಿತ್ತು. ದಿಲ್ಲಿಯಲ್ಲಿ ಚಿಲ್ಲರೆ 1 ಕಿ.ಗ್ರಾಂಗೆ 70ರಿಂದ 80 ರೂಪಾಯಿ ದಾಖಲಾಗಿತ್ತು. ಇದರಿಂದ ಗ್ರಾಹಕರು ಕೇವಲ 250ರಿಂದ 500 ಕಿ.ಗ್ರಾಂ. ಮಾತ್ರ ಈರುಳ್ಳಿ ಖರೀದಿಸುತ್ತಿದ್ದರು ಎಂದು ಈರುಳ್ಳಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ತಿಂಡಿಗಳ ಬೆಲೆ ಏರಿಕೆ
ಮುಂಬೈ: ಈರುಳ್ಳಿ ಬೆಲೆ ಏರಿಕೆಯಿಂದ ನಗರದ ರೆಸ್ಟೋರೆಂಟ್ ಹಾಗೂ ಹೊಟೇಲ್‌ಗಳಲ್ಲಿ ಈರುಳ್ಳಿ ಬಳಕೆಯ ತಿನಿಸುಗಳ ಬೆಲೆ ಏರಿಕೆ ಮಾಡಲಾಗಿದೆ. ಈರುಳ್ಳಿ ಬೆಲೆ ಗಗನಕ್ಕೇರಿರುವುದರಿಂದ ಉದ್ಯಮ ನಡೆಸುವುದು ಕಷ್ಟಕರವಾಗಿದೆ. ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವುದಲ್ಲದೆ, ಬೇರೆ ದಾರಿ ಇಲ್ಲ ಎಂದು ರೆಸ್ಟೋರೆಂಟ್ ಮಾಲಕರೊಬ್ಬರು ಹೇಳಿದ್ದಾರೆ.
‘‘ಕೆಲವು ಗ್ರಾಹಕರು ಮುಖ್ಯ ಭಕ್ಷದೊಂದಿಗೆ ಈರುಳ್ಳಿ ತುಂಡುಗಳನ್ನು ಕೇಳುತ್ತಾರೆ. ಆದರೆ, ಪ್ಲೇಟ್ ಈರುಳ್ಳಿ ತುಂಡುಗಳಿಗೆ ಹೆಚ್ಚುವರಿ 15 ರೂಪಾಯಿ ಪಾವತಿಸಬೇಕು ಎಂದು ನಾವು ಬೋರ್ಡ್ ಹಾಕಿದ್ದೇವೆ. ಉಚಿತವಾಗಿ ಈರುಳ್ಳಿ ತುಂಡುಗಳನ್ನು ನೀಡಲು ಸಾಧ್ಯವಿಲ್ಲದೇ ಇರುವುದರಿಂದ ನಾವು ಈ ನಿರ್ಧಾರಕ್ಕೆ ಬಂದೆವು’’ ಎಂದು ಸಯಾನ್-ಕೋಲಿವಾಡದಲ್ಲಿರುವ ಭಾರತ್ ಲಂಚ್ ಹೋಮ್‌ನ ಮಾಲಕ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
22 ಲಕ್ಷ ರೂ. ಮೌಲ್ಯದ ಈರುಳ್ಳಿ ಹೊರೆ ಕಳವು
ಈ ನಡುವೆ, 20ರಿಂದ 22 ಲಕ್ಷ ರೂಪಾಯಿ ವೌಲ್ಯದ ಈರುಳ್ಳಿ ಹೊರೆಯನ್ನು ಮಧ್ಯಪ್ರದೇಶದ ಶಿವಪುರಿಯಲ್ಲಿ ಕಳವುಗೈಯಲಾಗಿದೆ ಎಂದು ವ್ಯಾಪಾರಿಯೊಬ್ಬರು ಗುರುವಾರ ಆರೋಪಿಸಿದ್ದಾರೆ.
40 ಟನ್ ಈರುಳ್ಳಿಯನ್ನು ಟ್ರಕ್ ಮೂಲಕ ಮಹಾರಾಷ್ಟ್ರದ ನಾಸಿಕ್‌ನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಸಾಗಿಸಲಾಗಿತ್ತು. ಆದರೆ, ಖಾಲಿ ಟ್ರಕ್ ಮಧ್ಯಪ್ರದೇಶದ ಶಿವಪುರಿಯ ಟೆಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಪತ್ತೆಯಾಗಿದೆ.
ನವೆಂಬರ್ 11ರಂದು ಈರುಳ್ಳಿ ತುಂಬಿದ ಟ್ರಕ್ ಇಲ್ಲಿಂದ ಹೊರಟಿತ್ತು. ಟ್ರಕ್ ನವೆಂಬರ್ 22ರಂದು ಗೋರಕ್‌ಪುರಕ್ಕೆ ತಲುಪಬೇಕಿತ್ತು. ಆದರೆ, ಅದು ಅಲ್ಲಿಗೆ ತಲುಪಿಲ್ಲ. ಬದಲಾಗಿ ಶಿವಪುರಿಯಲ್ಲಿ ಖಾಲಿ ಟ್ರಕ್ ಪತ್ತೆಯಾಗಿದೆ ಎಂದು ಈರುಳ್ಳಿ ಸಾಗಾಟ ಮಾಡಿದ ಸಗಟು ವ್ಯಾಪಾರಿ ಪ್ರೇಮ್ ಚಂದ್ ಶುಕ್ಲಾ ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಶ್ ಸಿಂಗ್ ಚಂಡೇಲ್ ಅವರನ್ನು ಭೇಟಿಯಾಗಿರುವ ಶುಕ್ಲಾ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ‘‘ನಾವು ಪ್ರಕರಣ ದಾಖಲಿಸುತ್ತೇವೆ ಹಾಗೂ ಆರೋಪಿಗಳನ್ನು ಬಂಧಿಸುತ್ತೇವೆ’’ ಎಂದು ಸಿಂಗ್ ಭರವಸೆ ನೀಡಿದ್ದಾರೆ.