ವೈದ್ಯೆಯ ಅತ್ಯಾಚಾರ ಪ್ರಕರಣ: ನಾಲ್ವರನ್ನು ವಶಕ್ಕೆ ಪಡೆದ ಸೈಬರಾಬಾದ್ ಪೊಲೀಸ್

Update: 2019-11-29 17:29 GMT

ಹೈದರಾಬಾದ್, ನ. 29: ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೈಬರಾಬಾದ್ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವಶಕ್ಕೆ ತೆಗೆದುಕೊಳ್ಳಲಾದ ವ್ಯಕ್ತಿಗಳಲ್ಲಿ ಇಬ್ಬರು ಲಾರಿ ಚಾಲಕರು ಹಾಗೂ ಇಬ್ಬರು ಕ್ಲೀನರ್ ಸೇರಿದ್ದಾರೆ.

26 ವರ್ಷದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿಯ ಕರಟಿದ ಮೃತದೇಹ ಹೈದರಾಬಾದ್‌ನ ಹೊರವಲಯದ ಶಾದ್‌ನಗರ್‌ನಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿತ್ತು. ಬುಧವಾರ ಆಸ್ಪತ್ರೆಯಿಂದ ಮನೆಗೆ ಆಗಮಿಸುತ್ತಿದ್ದ ಸಂದರ್ಭ ಪ್ರಿಯಾಂಕಾ ರೆಡ್ಡಿ ನಾಪತ್ತೆಯಾಗಿದ್ದರು. ಅನಂತರ ಅವರ ಮೃತದೇಹ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು.

 ಒಆರ್‌ಆರ್ ಟೋಲ್ ಪ್ಲಾಜಾದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟರ್‌ನಲ್ಲಿ ಅವರು ಮನೆಗೆ ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅನಂತರ ತನ್ನ ಸ್ಕೂಟರ್‌ನ ಟಯರ್‌ನ ಗಾಳಿ ಖಾಲಿಯಾಗಿದೆ. ತನಗೆ ಕೆಲವು ಅಪರಿಚಿತರು ನೆರವು ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ರೆಡ್ಡಿ ತನ್ನ ಸಹೋದರಿ ಪಿ. ಭವ್ಯಾ ರೆಡ್ಡಿಗೆ ಕರೆ ಮಾಡಿ ತಿಳಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

   ತನಗೆ ನೆರವು ನೀಡುತ್ತಿರುವ ಜನರ ಬಗ್ಗೆ ಭೀತಿಯಿದೆ. ಆದುದರಿಂದ ಫೋನ್‌ನಲ್ಲಿ ನಿರಂತರ ಮಾತನಾಡುತ್ತಿರುವಂತೆ ಪ್ರಿಯಾಕಾ ರೆಡ್ಡಿ ತಂಗಿಗೆ ತಿಳಿಸಿದ್ದಾರೆ. ಕೆಲವು ನಿಮಿಷಗಳ ಅನಂತರ ಪ್ರಿಯಾಂಕಾ ರೆಡ್ಡಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ರೆಡ್ಡಿ ಕುಟುಂಬ ಪೊಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News