ವಿಶ್ವಾಸಮತ ಜಯಿಸಿದ ಠಾಕ್ರೆ ಸರಕಾರ

Update: 2019-11-30 14:04 GMT

ಮುಂಬೈ, ನ.30: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರಕಾರವು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಂಡಿದೆ.

 ಹಂಗಾಮಿ ಸ್ಪೀಕರ್‌ರನ್ನು ಬದಲಿಸಿದ ನಡೆಯನ್ನು ಖಂಡಿಸಿ ಮತ್ತು ನೂತನ ಸರಕಾರವು ಸದನದ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಮತದಾನಕ್ಕೆ ಮುನ್ನ ಸಭಾತ್ಯಾಗ ನಡೆಸಿದರು. ಮಂಗಳವಾರ ವಿಧಾನಸಭೆಯಲ್ಲಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ್ದ ಬಿಜೆಪಿಯ ಕಾಳಿದಾಸ ಕೊಳಂಬಕರ್ ಬದಲಿಗೆ ಎನ್‌ಸಿಪಿಯ ದಿಲೀಪ ವಳಸೆ ಪಾಟೀಲ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳಿಸಿದ್ದು ಕಮಲ ಪಕ್ಷವನ್ನು ಕೆರಳಿಸಿತ್ತು. ಕಾಯಂ ಸ್ಪೀಕರ್ ಆಯ್ಕೆ ರವಿವಾರ ನಡೆಯಲಿದೆ.

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಥವಾ ‘ಮಹಾ ವಿಕಾಸ ಅಘಾಡಿ’ 288 ಸದಸ್ಯಬಲದ ಸದನದಲ್ಲಿ 169 ಮತಗಳನ್ನು ಗೆಲ್ಲುವ ಮೂಲಕ ಮ್ಯಾಜಿಕ್ ಸಂಖ್ಯೆ 145ನ್ನು ಆರಾಮವಾಗಿ ದಾಟಿತು. ಈ ಮೂರೂ ಪಕ್ಷಗಳು ಒಟ್ಟು 154 ಶಾಸಕರನ್ನು ಹೊಂದಿವೆ. ಕೆಲವು ಪಕ್ಷೇತರರು ಮತ್ತು ಬಹುಜನ ವಿಕಾಸ ಅಘಾಡಿಯಂತಹ ಸಣ್ಣಪುಟ್ಟ ಪಕ್ಷಗಳೂ ಉದ್ಧವ್ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸಿದವು. ನಾಲ್ವರು ಶಾಸಕರು ಮತದಾನದಲ್ಲಿ ಭಾಗವಹಿಸಲಿಲ್ಲ.

ಕೇಸರಿ ರುಮಾಲನ್ನು ಧರಿಸಿದ್ದ ಉದ್ಧವ್ ತನ್ನಲ್ಲಿ ವಿಶ್ವಾಸವಿರಿಸಿದ್ದಕ್ಕಾಗಿ ಎಲ್ಲ ಸದಸ್ಯರು ಮತ್ತು ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪ್ರಪ್ರಥಮ ಬಾರಿಗೆ ಸದನವನ್ನು ಪ್ರವೇಶಿಸಿರುವ ಉದ್ಧವ್ ಹಿಂದೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಇನ್ನೋರ್ವ ಶಿವಸೇನೆ ಶಾಸಕರೊಂದಿಗೆ ಆಸೀನರಾಗಿದ್ದರು.

ವಿಶ್ವಾಸಮತಕ್ಕೆ ಮುನ್ನ ಉದ್ಧವ್ ವಿಧಾನಸಭೆಯ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಗೌರವಾರ್ಪಣೆ ಮಾಡಿದರು. ಸದನದಲ್ಲಿ ಉಪಸ್ಥಿತರಿರುವಂತೆ ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ಸಚೇತಕಾಜ್ಞೆ ಹೊರಡಿಸಿದ್ದವು. ಕಾಂಗ್ರೆಸ್ ನಾಯಕ ಅಶೋಕ್ ಚವಾಣ ಅವರು ವಿಶ್ವಾಸಮತ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.

ಬಿಜೆಪಿ ಸಭಾತ್ಯಾಗ

ವಿಶ್ವಾಸಮತಕ್ಕೆ ಮುನ್ನ ಎನ್‌ಸಿಪಿಯ ದಿಲೀಪ್ ವಳಸೆ ಪಾಟೀಲ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳಿಸಿದ್ದನ್ನು ವಿರೋಧಿಸಿ ಫಡ್ನವೀಸ್ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು.

ಭಾರತದ ಇತಿಹಾಸದಲ್ಲೆಂದೂ ವಿಧಾನಸಭೆಯ ಹಂಗಾಮಿ ಸ್ಪೀಕರ್‌ರನ್ನು ಬದಲಿಸಿದ ನಿದರ್ಶನವಿಲ್ಲ. ಹಂಗಾಮಿ ಸ್ಪೀಕರ್‌ರನ್ನು ಬದಲಿಸಿದ್ದು ಏಕೆ? ಮಹಾರಾಷ್ಟ್ರ ವಿಧಾನಸಭೆಯ ಇತಿಹಾಸದಲ್ಲೆಂದೂ ಸ್ಪೀಕರ್ ಅವರನ್ನು ಆಯ್ಕೆ ಮಾಡದೆ ವಿಶ್ವಾಸಮತವನ್ನು ನಡೆಸಲಾಗಿಲ್ಲ. ಈ ಬಾರಿ ಅಂತಹ ಭೀತಿ ಏನಿತ್ತು ಎಂದು ಪಕ್ಷದ ಸದಸ್ಯರೊಂದಿಗೆ ಸಭಾತ್ಯಾಗಕ್ಕೆ ಮುನ್ನ ಫಡ್ನವೀಸ್ ಪ್ರಶ್ನಿಸಿದರು.

ಅಧಿವೇಶನವನ್ನು ಕರೆದಾಗ ಅದು ವಂದೇ ಮಾತರಂನೊಂದಿಗೆ ಆರಂಭಗೊಳ್ಳುತ್ತದೆ ಮತ್ತು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ ಇಲ್ಲಿ ವಂದೇ ಮಾತರಂ ಇಲ್ಲದೆ ಅಧಿವೇಶನವನ್ನು ಆರಂಭಿಸುವ ಮೂಲಕ ಸದನದ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದರು. ಅಧಿವೇಶನದ ಕುರಿತು ಬಿಜೆಪಿ ಸದಸ್ಯರಿಗೆ ತಡವಾಗಿ ಮಾಹಿತಿ ನೀಡಲಾಗಿತ್ತು ಎಂದೂ ಅವರು ಆರೋಪಿಸಿದರು.

ಫಡ್ನವೀಸ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಹಂಗಾಮಿ ಸ್ಪೀಕರ್ ಪಾಟೀಲ್ ಅವರು,ರಾಜ್ಯಪಾಲ ಬಿ.ಎಸ್.ಕೋಶಿಯಾರಿ ಅವರ ಅನುಮತಿಯೊಂದಿಗೆ ಎರಡು ದಿನಗಳ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ,ಹೀಗಾಗಿ ನಿಯಮಾವಳಿಗಳಿಗೆ ವಿರುದ್ಧವಾಗಿಲ್ಲ ಎಂದು ತಿಳಿಸಿದರು.

ಉದ್ಧವ ಠಾಕ್ರೆ ಮತ್ತು ಇತರ ಸದಸ್ಯರು ‘ಅಕ್ರಮ’ ರೀತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಫಡ್ನವೀಸ್ ಆರೋಪಿಸಿದಾಗ,ನೀವು ಈ ಸದನಕ್ಕೆ ಹೊರತಾದ ವಿಷಯವನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದು ಪಾಟೀಲ್ ಹೇಳಿದರು.

ರವಿವಾರ ಸ್ಪೀಕರ್ ಚುನಾವಣೆ

ಮಹಾರಾಷ್ಟ್ರ ವಿಧಾನಸಭೆಯ ಕಾಯಂ ಸ್ಪೀಕರ್‌ರನ್ನು ರವಿವಾರ ಆಯ್ಕೆ ಮಾಡಲಾಗುವುದು. ಬಿಜೆಪಿಯು ತನ್ನ ಶಾಸಕ ಕಿಶನ್ ಕಥೋರೆ ಅವರನ್ನು ಸ್ಪೀಕರ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಕಾಂಗ್ರೆಸ್ ಶಾಸಕ ನಾನಾ ಪಾಟೋಲೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಕಥೋರೆ ಥಾಣೆಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರೆ ಪಾಟೋಲೆ ಭಂಡಾರಾ ಶಾಸಕರಾಗಿದ್ದಾರೆ. ನೂತನ ಸ್ಪೀಕರ್ ಅವರು ಪ್ರತಿಪಕ್ಷ ನಾಯಕನ ಹೆಸರನ್ನು ಪ್ರಕಟಿಸಲಿದ್ದಾರೆ.

ಹಂಗಾಮಿ ಸ್ಪೀಕರ್ ಬದಲಾವಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ: ಬಿಜೆಪಿ

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದಿಂದ ಹಂಗಾಮಿ ಸ್ಪೀಕರ್ ನೇಮಕದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವುದಾಗಿ ಮಹಾರಾಷ್ಟ್ರ ಬಿಜೆಪಿ ಶನಿವಾರ ಹೇಳಿದೆ.

ಮಹಾ ವಿಕಾಸ ಅಘಾಡಿಯು ಹಂಗಾಮಿ ಸ್ಪೀಕರ್ ಆಗಿದ್ದ ಕೊಳಂಬಕರ್ ಬದಲಿಗೆ ಪಾಟೀಲರನ್ನು ನೇಮಕಗೊಳಿಸಿದೆ. ಇದು ಕಾನೂನು ಪ್ರಕಾರ ತಪ್ಪು. ಪ್ರಮಾಣ ವಚನವನ್ನೂ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗಿಲ್ಲ. ನೂತನ ಸರಕಾರವು ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದೆ. ನಾವು ರಾಜ್ಯಪಾಲರಿಗೆ ಅಹವಾಲನ್ನು ಸಲ್ಲಿಸಲಿದ್ದೇವೆ ಮತ್ತು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಬಹುದು ಎಂದು ಬಿಜೆಪಿ ನಾಯಕ ಚಂದ್ರಕಾಂತ ಪಾಟೀಲ ಅವರು ವಿಶ್ವಾಸಮತಕ್ಕೆ ಮುನ್ನ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News